ನವದೆಹಲಿ: ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲಿನ ದಾಳಿಗೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ವಿಡಿಯೋಗಳನ್ನು ಹರಿಬಿಟ್ಟ ಆರೋಪದಡಿಯಲ್ಲಿ ಬಿಹಾರದ ಪೊಲೀಸರು ತ್ರಿಪುರಾರಿ ತಿವಾರಿ (ಮನೀಶ್ ಕಶ್ಯಪ್) ಎಂಬ ಯೂಟ್ಯೂಬರ್ನನ್ನು ಬಂಧಿಸಿದ್ದಾರೆ.
ಬಂಧನದ ಸುದ್ದಿ ಎಲ್ಲೆಡೆ ವರದಿಯಾದ ನಂತರ, ಟ್ಟಿಟ್ಟರ್ನಲ್ಲಿ ಯೂಟ್ಯೂಬರ್ ಮನೀಶ್ ಕಶ್ಯಪ್ ವಿರುದ್ಧ ಪರ ಮತ್ತು ವಿರೋಧದ ಕಾಮೆಂಟ್ಗಳು ಬಂದಿದ್ದು, ಈ ವಿಷಯಕ್ಕೆ ಸಂಬಂಧಿಸಿ ಟ್ವೀಟ್ ಮಾಡಿರುವ ಬಿಹಾರ ರಾಜ್ಯದ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಮನೀಶ್ ಕಶ್ಯಪ್ ಬಗ್ಗೆ ತಮ್ಮ ಬೆಂಬಲವನ್ನು ಸೂಚಿಸಿ, ‘‘ತುರ್ತು ಪರಿಸ್ಥಿತಿ, ಸರ್ವಾಧಿಕಾರ ಮತ್ತು ದಮನ’’ ಎಂದು ಟ್ವೀಟ್ ಮಾಡಿ ಬಿಹಾರ ಸರ್ಕಾರವನ್ನು ಕಟುವಾಗಿ ಟೀಕಿಸಿದಲ್ಲದೇ ‘ಸರ್ಕಾರ ದುರ್ಬಲವಾಗಿದೆ’ ಎಂದು ಹೇಳಿದ್ದಾರೆ.
‘ಬಿಹಾರ ಸರ್ಕಾರ ಮನೀಶ್ ಕಶ್ಯಪ್ ಜೊತೆ ತುರ್ತುಪರಿಸ್ಥಿತಿ, ಸರ್ವಾಧಿಕಾರ ಮತ್ತು ದಬ್ಬಾಳಿಕೆ ನಡೆಸುತ್ತಿದೆ. ಮನೀಶ್ ಕಶ್ಯಪ್ ವಿಚಾರದಲ್ಲಿ ಬಿಹಾರ ಸರ್ಕಾರದ ತೆಗದುಕೊಂಡ ನಿರ್ಧಾರವನ್ನು ಗಮನಿಸಿದರೆ ಸರ್ಕಾರವು ಬಹಳ ದುರ್ಬಲವಾಗಿದೆ ಎಂದು ತೋರಿಸುತ್ತದೆ’’ ಎಂದು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ಟ್ವೀಟ್ ಮಾಡಿದ್ದಾರೆ.
ಶುಭಂ ಶರ್ಮಾ ಎಂಬ ಟ್ವಿಟ್ಟರ್ ಬಳಕೆದಾರ ಟ್ವೀಟ್ ಮಾಡಿ ‘‘ಪೊಲೀಸರು ಮನೀಶ್ ಕಶ್ಯಪ ಅವರ ಬಳಿ ನಡೆದುಕೊಂಡ ರೀತಿಯನ್ನು ಗಮನಿಸಿದರೆ ಸುಮಾರು ವರ್ಷಗಳ ಕಾಲ ನೆನಪಿನಲ್ಲಿ ಉಳಿಯುತ್ತದೆ’’ ಎಂದು ಬರೆದಿದ್ದಾರೆ. ಜೊತೆಗೆ ‘‘ದಲಿತ ನಾಯಕರು ಮನೀಶ್ ಕಶ್ಯಪ್ ಅವರನ್ನು ‘ತ್ರಿಪುರಾರಿ ತಿವಾರಿ’ ಎಂದು ಉಲ್ಲೇಖಿಸಿದಕ್ಕಾಗಿ ಈ ರೀತಿಯಾದ ಕ್ರಮ ಕೈಗೊಳ್ಳಲಾಗುತ್ತಿದೆ. ನೀವು ನಿರ್ಧಿಷ್ಟ ಸಮುದಾಯದಿಂದ ಬಂದಿದ್ದರೆ ನಿಮ್ಮನ್ನು ಯಾವುದೇ ರಾಜಕೀಯ ಪಕ್ಷಗಳು ರಕ್ಷಿಸುವುದಿಲ್ಲ’’ ಎಂದು ಟ್ವೀಟ್ ಮಾಡಿದ್ದಾರೆ. ಯೂಟ್ಯೂಬರ್ ಮನೀಶ್ ಕಶ್ಯಪ್ ಅವರು 2020ರ ಚುನಾವಣೆಯಲ್ಲಿ ಚನ್ಪಾಟಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.