ಚೆನ್ನೈ: ತಮಿಳುನಾಡಿನ ತಿರುಚೆಂದೂರೈ ಗ್ರಾಮದ ಶಿವನ ದೇವಸ್ಥಾನಕ್ಕೆ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ಎಚ್ ರಾಜಾ ಭೇಟಿ ನೀಡಿದರು. ಈ ವೇಳೆ ಅವರು ಗ್ರಾಮಸ್ಥರನ್ನು ಭೇಟಿಯಾಗಿ ಗ್ರಾಮದ ನಿವೇಶನಗಳಿಗೆ ಸಂಬಂಧಿಸಿದ ವಕ್ಫ್ ಮಂಡಳಿಯ ಚಟುವಟಿಕೆಗಳ ಬಗ್ಗೆ ವಿಚಾರಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಕ್ಫ್ ಮಂಡಳಿಯು ತಿರುಚೆಂದೂರೈ ಮತ್ತು ತಿರುವೆರುಂಪುರ್‌ನಲ್ಲಿರುವ ಹಿಂದೂಗಳ ಆಸ್ತಿಯನ್ನು ಕಬಳಿಸಲು ನೋಡುತ್ತಿದೆ. ತಮಿಳುನಾಡಿನಲ್ಲಿ ಗೋಸ್ಟ್ಗಳ ಆಡಳಿತ ನಡೆಯುತ್ತಿದೆ ಎಂದು ಆರೋಪಿಸಿದರು.
ಎಚ್ ರಾಜಾ ಕಿಡಿ: ತಿರುಚ್ಚಿ ಜಿಲ್ಲೆಯ ತಿರುಚೆಂದೂರೈ ಗ್ರಾಮವು ವಕ್ಫ್ ಮಂಡಳಿಗೆ ಸೇರಿದ್ದು ಎಂದು ಮಂಡಳಿಯ ಅಧ್ಯಕ್ಷರು ಘೋಷಣೆ ಮಾಡಿರುವುದು ಕಾನೂನು ಬಾಹಿರವಾಗಿದೆ. ಇಂತಹ ವಂಚನೆಯಲ್ಲಿ ಭಾಗಿಯಾಗಿರುವ ವಕ್ಫ್ ಮಂಡಳಿಯ ಮುಖ್ಯ ಆಡಳಿತಾಧಿಕಾರಿಯನ್ನು ಕೂಡಲೇ ಬಂಧಿಸಬೇಕು. ಈ ವಿಚಾರದಲ್ಲಿ ಕೇವಲ ಹಿಂದೂಗಳಷ್ಟೇ ಅಲ್ಲ ಮುಸಲ್ಮಾನರಿಗೂ ತೊಂದರೆಯಾಗಿದೆ ಎಂದು ಎಚ್ ರಾಜಾ ಕಿಡಿಕಾರಿದರು.
ರಿಜಿಸ್ಟ್ರಾರ್ ಕಚೇರಿಗೆ ನೋಟಿಸ್: ತಿರುಚಿ ಜಿಲ್ಲೆಯ ತಿರುಚೆಂತುರೈ ಗ್ರಾಮ, ಸೆಂಪಂಕುಲಂ, ಪೆರಿಯನಾಯಕಛತ್ರಂ, ಚಿತ್ತನಂತಂ, ಕೊಮಕುಡಿ, ಮಾಮೇಡು ಮತ್ತು ಬಗನೂರ್ ಎಂಬ 7 ಗ್ರಾಮಗಳು ತಮ್ಮ ಒಡೆತನದ ಆಸ್ತಿ ಎಂದು ವಕ್ಫ್ ಮಂಡಳಿಯು ಈ ಹಿಂದೆ ರಿಜಿಸ್ಟ್ರಾರ್ ಕಚೇರಿಗೆ ನೋಟಿಸ್ ಕಳುಹಿಸಿತ್ತು. ಇದರಿಂದಾಗಿ ಆ ಪ್ರದೇಶದಲ್ಲಿ ಆಸ್ತಿ ಖರೀದಿಸಲು ಸಾಧ್ಯವಾಗದೇ, ಅಲ್ಲಿ ವಾಸಿಸುವ ಗ್ರಾಮಸ್ಥರು ತಮ್ಮ ಆಸ್ತಿಯನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ನಂತರ ತಿರುಚೆಂತುರೈನ ಎಲ್ಲಾ ಗ್ರಾಮಸ್ಥರು ಒಟ್ಟಾಗಿ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ:ಇಸ್ಲಾಂ ಬಿಟ್ಟು ಹಿಂದೂ ಧರ್ಮ ಸೇರಿದ ಮಾಜಿ ವಕ್ಫ್ ಮಂಡಳಿ ಅಧ್ಯಕ್ಷ!!
ಬಳಿಕ ಶ್ರೀರಂಗಂ ಕಂದಾಯ ಆಯುಕ್ತ ವೈದ್ಯನಾಥನ್ ನೇತೃತ್ವದಲ್ಲಿ ತಿರುಚೆಂತುರೈ ಗ್ರಾಮಸ್ಥರು ಹಾಗೂ ವಕ್ಫ್ ಮಂಡಳಿ ಅಧಿಕಾರಿಗಳ ನಡುವೆ ಶಾಂತಿ ಮಾತುಕತೆ ನಡೆಸಲಾಯಿತು. ಬಳಿಕ ತಿರುಚೆಂತುರೈ ಮತ್ತು ಕಡಿಯಾಕುರಿಚಿ ಗ್ರಾಮಗಳ ಜನರು ದಾಖಲೆಗಳನ್ನು ನೋಂದಾಯಿಸಿಕೊಳ್ಳಬಹುದು ಎಂದು ಶ್ರೀರಂಗಂ ಕಂದಾಯ ಆಯುಕ್ತರು ಆದೇಶಿಸಿದರು. ಈ ಹಿನ್ನೆಲೆ ಪ್ರತಿಭಟನೆ ಕೈಬಿಡಲಾಯಿತು.