ಕೋಲ್ಕತ್ತಾ (ಪಶ್ಚಿಮ ಬಂಗಾಳ) : ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ನಡೆದ ಹಿಂಸಾಚಾರದ ಬಗ್ಗೆ ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಗ್ನಿಮಿತ್ರ ಪಾಲ್ ಬುಧವಾರ ತೃಣಮೂಲ ಕಾಂಗ್ರೆಸ್ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೂಡಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಪಂಚಾಯತ್ ಚುನಾವಣೆಗೆ ರಾಜ್ಯ ಸಜ್ಜಾಗುತ್ತಿದ್ದಂತೆಯೇ ಹಿಂಸಾಚಾರ ಉಲ್ಬಣಗೊಂಡಿದೆ. ಹೀಗಾಗಿ, ರಾಜ್ಯದ ಪರಿಸ್ಥಿತಿಯನ್ನು ರಷ್ಯಾ-ಉಕ್ರೇನ್ ಯುದ್ಧಕ್ಕೆ ಹೋಲಿಸಿದ ಅಗ್ನಿಮಿತ್ರ ಪಾಲ್, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು ಕಳುಹಿಸದಿದ್ದರೆ ರಾಜ್ಯದಲ್ಲಿ ದೊಡ್ಡ ಪ್ರಮಾಣದ ರಕ್ತಪಾತವಾಗುತ್ತದೆ ಎಂದು ಹೇಳಿದರು.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅಗ್ನಿಮಿತ್ರ ಪಾಲ್, " ನಾಮ ನಿರ್ದೇಶನಕ್ಕೆ ಕೇವಲ 5-6 ದಿನಗಳು ಮಾತ್ರ ಇವೆ. ಚುನಾವಣೆ ಕುರಿತಂತೆ ಬೇರೆ ಯಾವುದೇ ರಾಜಕೀಯ ಪಕ್ಷಗಳ ಜೊತೆ ಆಡಳಿತ ಪಕ್ಷ ಚರ್ಚೆ ಮಾಡಿಲ್ಲ. ಯಾರ ಸಲಹೆಯನ್ನು ಪಡೆಯದೆ ಚುನಾವಣೆ ಘೋಷಿಸಲಾಗಿದೆ. ಬಿಜೆಪಿ ಹಾಗೂ ಇತರ ಪಕ್ಷಗಳ ಕಾರ್ಯಕರ್ತರಿಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡದಿರುವುದನ್ನು ನೋಡುತ್ತಿದ್ದೇವೆ. ನಾಮಪತ್ರ ಸಲ್ಲಿಕೆ ವೇಳೆ ರಾಜ್ಯದಲ್ಲಿ ನಡೆದ ಹಿಂಸಾಚಾರದ ಘಟನೆಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಹಲವು ವಿರೋಧ ಪಕ್ಷದ ನಾಯಕರು ತಮ್ಮ ಮೇಲೆ ಸಹ ಹಲ್ಲೆ ನಡೆಸಿದ್ದಾರೆ" ಎಂದು ಆರೋಪಿಸಿದರು.
"ಡೈಮಂಡ್ ಹಾರ್ಬರ್, ಜಾಯ್‌ನಗರ, ಕ್ಯಾನಿಂಗ್, ಕಾಕದ್ವೀಪ್ ಮತ್ತು ಬರ್ಧಮಾನ್‌ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಕಬ್ಬಿಣದ ರಾಡ್‌ಗಳಿಂದ ಥಳಿಸಲಾಗುತ್ತಿದೆ ಎಂದು ಸ್ಥಳೀಯ ಮುಖಂಡರು ಹೇಳಿದ್ದಾರೆ. ಬಾಂಬ್‌ಗಳು ಸ್ಫೋಟಗೊಳ್ಳುತ್ತಿವೆ. ದೊಡ್ಡ ಪ್ರಮಾಣದಲ್ಲಿ ಮದ್ದುಗುಂಡುಗಳನ್ನು ಸಂಗ್ರಹಿಸಲಾಗಿದೆ. ರಾಜ್ಯದಲ್ಲಿ ರಷ್ಯಾ-ಉಕ್ರೇನ್ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಅರಾಜಕತೆಯನ್ನು ಖಂಡಿಸಿ ತಕ್ಷಣವೇ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು" ಎಂದು ಆಗ್ರಹಿಸಿದರು.