ನವದೆಹಲಿ : ಇಂದು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ಸಿಇಸಿ ನಡೆಯಲಿದೆ. ಈ ಮಹತ್ವದ ಸಭೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ ಸೇರಿದಂತೆ ಪಂಚರಾಜ್ಯಗಳ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಈ ಅಂಗವಾಗಿ ಇಂದು ನಡೆಯಲಿರುವ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಸಿಇಸಿ ಸಮಿತಿ ಸದಸ್ಯರಾಗಿರುವ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ನಡುವೆ ರಾಜ್ಯದಲ್ಲಿ ಈಗ ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರವೂ ಭರ್ಜರಿಯಾಗಿಯೇ ಸದ್ದು ಮಾಡುತ್ತಿದೆ. ಈ ಬಗ್ಗೆ ಮೊದಲ ಬಾರಿಗೆ ಮಾಜಿ ಸಿಎಂ ಯಡಿಯೂರಪ್ಪ ಬಾಯ್ಬಿಟ್ಟಿದ್ದರು. ಮಾಜಿ ಪ್ರಧಾನಿ ದೇವೇಗೌಡ ಗೃಹ ಸಚಿವ ಅಮಿತ್ ಶಾ ಜತೆ ಮೈತ್ರಿ ಮಾತುಕತೆ ನಡೆಸಿದ್ದಾರೆ ಎಂದು ಬಿಎಸ್ವೈ ಹೇಳಿದ್ದರು.
ಆ ಬಳಿಕ ಮಾಜಿ ಪ್ರಧಾನಿ ದೇವೇಗೌಡ ಸಹ ಪ್ರಧಾನಿ ಜತೆ ಮೈತ್ರಿ ವಿಚಾರವಾಗಿ ಮಾತನಾಡಿದ್ದೆ ಎಂದು ಬಹಿರಂಗ ಪಡಿಸಿದ್ದರು. ಆ ಬಳಿಕ ಜೆಡಿಎಸ್ ಶಾಸಕರು, ಸಂಸದರು ಹಾಗೂ ನಾಯಕರ ಸಭೆ ನಡೆಸಿ ಅಭಿಪ್ರಾಯ ಕೂಡ ಸಂಗ್ರಹಿಸಿದ್ದರು. ಅತ್ತ ಬಿಜೆಪಿ ನಾಯಕರು ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಸಭೆ ಸೇರಿ ಮೈತ್ರಿ ಸೇರಿದಂತೆ ಕರ್ನಾಟಕ ಚುನಾವಣೆ ಬಗ್ಗೆ ಚರ್ಚೆ ನಡೆಸಿದ್ದರು. ಈ ಸಭೆ ಬಳಿಕ ಮಾತನಾಡಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ನಾಳೆ ದೆಹಲಿಗೆ ತೆರಳುತ್ತಿದ್ದು, ಅಲ್ಲಿ ಎಲ್ಲ ನಾಯಕರನ್ನು ಭೇಟಿ ಮಾಡುತ್ತೇನೆ. ಚುನಾವಣಾ ಮಂಡಳಿ ಸಭೆಯಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದ್ದರು.