ಚೆನ್ನೈ: ತಮಿಳುನಾಡಿನಲ್ಲಿ ಕಾಂಗ್ರೆಸ್ ತೀವ್ರ ನಿಗಾ ಘಟಕದಲ್ಲಿದೆ. ಅದರ ಆಮ್ಲಜನಕ ದ್ರಾವಿಡ ಪಾಲುದಾರ ಡಿಎಂಕೆಯಾಗಿದೆ. ಅದು ಇಲ್ಲದೇ ಬದುಕಲು ಸಾಧ್ಯವಿಲ್ಲ. ದಿನದಿಂದ ದಿನಕ್ಕೆ ಬಿಜೆಪಿ ಬೆಳೆಯುತ್ತಲೇ ಇದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಮ್ಮ ಪಕ್ಕ ಏಕಾಂಗಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವೇ ಇಲ್ಲ ಎಂಬ ಟಿಎನ್‌ಸಿಸಿ ಮುಖ್ಯಸ್ಥ ಕೆ.ಎಸ್. ಅಳಗಿರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅಣ್ಣಾಮಲೈ, ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಅವರು ತೀವ್ರ ನಿಗಾ ಘಟಕಕ್ಕೆ ಕರೆದೊಯ್ದಿದ್ದಾರೆ. ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷವನ್ನು ಬೆಂಬಲಿಸುತ್ತಿರುವ 'ಆಮ್ಲಜನಕ' ಎಂದರೇ ಅದು ಡಿಎಂಕೆ. ಒಮ್ಮೆ ಆಮ್ಲಜನಕ ಪೂರೈಕೆ ಸ್ಥಗಿತಗೊಂಡರೆ, ಕಾಂಗ್ರೆಸ್ ಪಕ್ಷವು ಒಂದೇ ಒಂದು ಕ್ಷೇತ್ರದಲ್ಲಿಯೂ ಚುನಾವಣೆಯಲ್ಲಿ ತನ್ನ ಠೇವಣಿ ಪಡೆಯಲು ಸಾಧ್ಯವಿಲ್ಲ ಎಂದು ಅವರು ಟೀಕಾಪ್ರಹಾರ ನಡೆಸಿದ್ದಾರೆ.
ಡಿಎಂಕೆ ಬೆಂಬಲವಿಲ್ಲದೇ ರಾಷ್ಟ್ರೀಯ ಪಕ್ಷ ಏಕಾಂಗಿಯಾಗಿ ಕಣಕ್ಕಿಳಿದಿರುವ ಸಂದರ್ಭದಲ್ಲಿ ಬ್ಯಾಲೆಟ್ ಪೇಪರ್‌ನಲ್ಲಿ ಕಾಂಗ್ರೆಸ್ ಪಕ್ಷದ ಹೆಸರನ್ನು ಅಚ್ಚೊತ್ತುವುದು ವ್ಯರ್ಥವಾಗುತ್ತದೆ. ಬದಲಿಗೆ, ಅಳಗಿರಿ ಅವರ ವಿಘಟಿತ ಪಕ್ಷವನ್ನು ಒಗ್ಗೂಡಿಸಲು ಪ್ರಯತ್ನಿಸಬೇಕು ಮತ್ತು ಬಿಜೆಪಿ 'ಫೆವಿಕ್ವಿಕ್' ನೀಡಲು ಸಿದ್ಧವಾಗಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ 25 ಸಂಸದೀಯ ಕ್ಷೇತ್ರಗಳನ್ನು ಗೆಲ್ಲಲಿದೆ ಮತ್ತು ಅಳಗಿರಿ ಅಣ್ಣನ್ ಅದನ್ನು ನೋಡಲಿದ್ದಾರೆ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ:ಸರ್ಕಾರಿ ಶಾಲಾ ಮಕ್ಕಳೊಂದಿಗೆ ಪ್ರಧಾನಿ ಸಂವಾದ.. ಪುಟ್ಟ ಮಕ್ಕಳ ಪ್ರತಿಭೆಗೆ ನಮೋ ಬೆರಗು!
ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಇದೇ ತರ್ಕ ಬಿಜೆಪಿಗೆ ಅನ್ವಯಿಸುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಪಕ್ಷವು ಇತ್ತೀಚಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದೆ ಎಂದು ತಿರುಗೇಟು ನೀಡಿದರು. ನಮ್ಮ ಪಕ್ಷವು ಮೂರನೇ ಅತಿದೊಡ್ಡ ಪಕ್ಷವೆಂದು ಗುರುತಿಸಿಕೊಂಡಿದೆ. ನಾವು ಪ್ರತಿದಿನ ಜನರ ಬೆಂಬಲವನ್ನು ಪಡೆಯುತ್ತಿದ್ದೇವೆ. ತಮಿಳುನಾಡಿನಲ್ಲಿ ಬಿಜೆಪಿ ನಂಬರ್ 1 ಪಕ್ಷ ಎಂದು ನಾನು ಹೇಳುತ್ತಿಲ್ಲ, ಆದರೆ ಪಕ್ಷ ಮತ್ತು ಕಾರ್ಯಕರ್ತರು ಆ ಗುರಿಯತ್ತ ಶ್ರಮಿಸುತ್ತಿದ್ದಾರೆ ಎಂದು ಅವರು ಹೇಳಿದರು.