ಕರ್ನಾಟಕ

karnataka

ETV Bharat / bharat

BJP-JDS alliance: ಎನ್​ಡಿಎ ಮೈತ್ರಿಕೂಟ ಸೇರಿದ ಜೆಡಿಎಸ್​ - ಹೊಸ ರಾಜಕೀಯ ಶಕೆ ಆರಂಭ ಎಂದ ಕುಮಾರಸ್ವಾಮಿ - ಜೆಡಿಎಸ್

BJP-JDS alliance: ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್​ ನಾಯಕ ಹೆಚ್‌.ಡಿ. ಕುಮಾರಸ್ವಾಮಿ ಭೇಟಿ ಮಾಡಿದರು. ಈ ಎರಡು ಪಕ್ಷಗಳ ನಾಯಕರು ಮೈತ್ರಿ ವಿಚಾರವಾಗಿ ಔಪಚಾರಿಕವಾಗಿ ಚರ್ಚೆ ನಡೆಸಿದರು.

BJP-JDS alliance
ಎನ್​ಡಿಎ ಮೈತ್ರಿಕೂಟ ಸೇರಿದ ಜೆಡಿಎಸ್​

By ETV Bharat Karnataka Team

Published : Sep 22, 2023, 5:14 PM IST

Updated : Sep 22, 2023, 8:04 PM IST

ನವದೆಹಲಿ:ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ಕ್ಕೆ ಜನತಾ ದಳ (ಜಾತ್ಯತೀತ) ಪಕ್ಷ ಶುಕ್ರವಾರ ಸೇರ್ಪಡೆಗೊಂಡಿದೆ. ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕ ಹೆಚ್‌.ಡಿ. ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಔಪಚಾರಿಕ ಮಾತುಕತೆ ನಡೆಸುವ ಮೂಲಕ ರಾಜ್ಯದಲ್ಲಿ ಜೆಡಿಎಸ್​ ಹಾಗೂ ಬಿಜೆಪಿ ಮೈತ್ರಿಯನ್ನು ಖಚಿತ ಪಡಿಸಿದ್ದಾರೆ. ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಗೋವಾ ಸಿಎಂ ಪ್ರಮೋದ್ ಸಾವಂತ್ ಹಾಗೂ ಜೆಡಿಎಸ್​ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಉಪಸ್ಥಿತರಿದ್ದರು.

''ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಭಾಗವಾಗಲು ಜೆಡಿಎಸ್ ನಿರ್ಧರಿಸಿರುವುದು ನನಗೆ ಖುಷಿ ತಂದಿದೆ. ನಾವು ಅವರನ್ನು ಎನ್‌ಡಿಎಗೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಇದು ಎನ್‌ಡಿಎ ಮತ್ತು ಹೊಸ ಭಾರತ, ಬಲಿಷ್ಠ ಭಾರತ ಎಂಬ ಪ್ರಧಾನಿಯವರ ದೃಷ್ಟಿಯನ್ನು ಮತ್ತಷ್ಟು ಬಲಪಡಿಸುತ್ತದೆ'' ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸಾಮಾಜಿಕ ಜಾಲತಾಣವಾದ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಹೊಸ ರಾಜಕೀಯ ಶಕೆ ಆರಂಭ- ಹೆಚ್​ಡಿಕೆ: ಇಂದು ನಾವು ಬಿಜೆಪಿಯೊಂದಿಗೆ ಕೈಜೋಡಿಸುವ ಬಗ್ಗೆ ಔಪಚಾರಿಕವಾಗಿ ಚರ್ಚೆ ಮಾಡಿದ್ದೇವೆ. ನಾವು ಪ್ರಾಥಮಿಕ ವಿಷಯಗಳನ್ನು ಔಪಚಾರಿಕವಾಗಿ ಚರ್ಚಿಸಿದ್ದೇವೆ. ಆದರೆ, ಅವರ ಮುಂದೆ ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಹೊಸ ರಾಜಕೀಯ ಶಕೆ ಆರಂಭಕ್ಕೆ ನಾಂದಿ ಹಾಡುವ ನಿಟ್ಟಿನಲ್ಲಿ, ಜೆಡಿಎಸ್‌ ಪಕ್ಷವು ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆ ಆಗುವ ಬಗ್ಗೆ ಕೇಂದ್ರ ಗೃಹ ಸಚಿವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಜೊತೆ ಮಹತ್ವದ ಮಾತುಕತೆ ಸೌಹಾರ್ದ, ಪರಸ್ಪರ ವಿಶ್ವಾಸದಿಂದ ನಡೆಯಿತು'' ಎಂದು ಅವರು ತಿಳಿಸಿದ್ದಾರೆ.

''ಮೈತ್ರಿ ಬಗ್ಗೆ ನಡೆದ ಮಾತುಕತೆ ನನಗೆ ಬಹಳ ಸಂತಸವಾಗಿದೆ. ಮುಂದೆ ಎಲ್ಲವೂ ಸುಗಮವಾಗಿ ನಡೆಯುತ್ತದೆ. ಯಾರು ಯಾರಿಗೆ ಎಷ್ಟು ಸೀಟು ಹಂಚಿಕೆ ಆಗುತ್ತದೆ ಎನ್ನುವುದು ಮುಖ್ಯವಲ್ಲ ಎಂದು ಅನೇಕ ಬಾರಿ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ರಾಜ್ಯದ 28 ಕ್ಷೇತ್ರಗಳಿಗೆ 28 ಅನ್ನು ಗೆಲ್ಲುವ ಬಗ್ಗೆ ಚರ್ಚೆ ನಡೆಸಲಾಯಿತು. ಈ ವಿಷಯವನ್ನು ನಾನು ಬಿಜೆಪಿ ವರಿಷ್ಠರಿಗೆ ಒತ್ತಿ ಹೇಳಿದ್ದೇನೆ. ನನ್ನ ಮಾತಿಗೆ ಅವರೂ ಸಹಮತ ವ್ಯಕ್ತಪಡಿಸಿದ್ದಾರೆ'' ಎಂದಿದ್ದಾರೆ.

''ಬಿಜೆಪಿ ಸ್ಥಳೀಯ ನಾಯಕರನ್ನು ದೆಹಲಿ ಕರೆಸಿ ಮಾತುಕತೆ ನಡೆಸುವುದು, ನಂತರ ಎರಡೂ ಪಕ್ಷಗಳ ಹಿರಿಯರನ್ನು ಕರೆದು ಪರಸ್ಪರ ಸಮನ್ವಯತೆ ಮಾತುಕತೆ ನಡೆಸುವ ಹಾಗೂ ದಸರಾ ಹಬ್ಬದ ನಂತರ ಎಲ್ಲ ನಿರ್ಧಾರಗಳನ್ನು ಕೈಗೊಳ್ಳುವ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು. ಅಲ್ಲದೇ, ಈ ಮೈತ್ರಿ ದೀರ್ಘಕಾಲೀನವಾಗಿರಬೇಕು, ಇದರಲ್ಲಿ ರಾಜ್ಯದ ಹಿತ ಅಡಗಿರಬೇಕು ಎಂಬ ಬಗ್ಗೆ ಸಮಾಲೋಚನೆ ನಡೆಸಲಾಯಿತು'' ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯದ ಸಮಸ್ಯೆಗಳ ಬಗ್ಗೆಯೂ ಮಾತುಕತೆ: ''ಬರೀ ಮೈತ್ರಿಯ ಬಗ್ಗೆಯಷ್ಟೇ ಕೇಳಬೇಡಿ. ಕಾವೇರಿ ವಿಷಯದ ಬಗ್ಗೆಯೂ ಕೇಳಿ. ನಾನಿಲ್ಲಿ ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಮಾತುಕತೆ ನಡೆಸಲು ಬಂದಿದ್ದೇನೆ. ಕಾವೇರಿ, ಬರ ಸೇರಿದಂತೆ ರಾಜ್ಯದ ಮುಂದಿರುವ ಸಮಸ್ಯೆಗಳ ಬಗ್ಗೆ ಬಿಜೆಪಿ ವರಿಷ್ಠರ ಗಮನ ಸೆಳೆದಿದ್ದೇನೆ. ಈ ಮೈತ್ರಿಯಿಂದ ಕಾವೇರಿ ನೀರು ಸೇರಿದಂತೆ ನಮ್ಮ ರಾಜ್ಯಕ್ಕೆ ಆಗಿರುವ ಸಮಸ್ಯೆಗಳಿಗೆ ಉತ್ತಮ ಪರಿಹಾರ ಸಿಗುತ್ತದೆ. ಈ ಅಂಶವನ್ನು ಇಟ್ಟುಕೊಂಡೇ ನಾನು ಅಮಿತ್‌ ಶಾ ಮತ್ತು ನಡ್ಡಾ ಅವರೊಂದಿಗೆ ಮುಕ್ತವಾಗಿ ಚರ್ಚಿಸಿದ್ದೇನೆ'' ಎಂದು ಹೆಚ್​ಡಿಕೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಹೆಚ್​ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಹೇಳಿದ್ದು ಹೀಗೆ:''ಕರ್ನಾಟಕದ ಜನತೆಯ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಅದರಲ್ಲೂ ವಿಶೇಷವಾಗಿ ಜಾತ್ಯತೀತತೆಯೇ ತಮ್ಮ ಗುರುತಾಗಿಸಿಕೊಂಡಿರುವ ಎಚ್‌.ಡಿ. ದೇವೇಗೌಡರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದು ದೊಡ್ಡ ನಿರ್ಧಾರ. ಮೈತ್ರಿ ಹಿನ್ನೆಲೆ ಸೀಟು ಹಂಚಿಕೆ ಮತ್ತು ಇತರ ವಿಷಯಗಳ ಬಗ್ಗೆ ಸಮಗ್ರ ಚರ್ಚೆ ಮಾಡಲು ನಾವು ಸ್ವಲ್ಪ ಸಮಯ ಬೇಕಾಗಲಿದೆ. ಹಲವು ವಿಷಯಗಳ ಕುರಿತು ಇನ್ನೂ ಚರ್ಚೆ ನಡೆದಿಲ್ಲ'' ಎಂದು ಎಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ಯಡಿಯೂರಪ್ಪ, ಬೊಮ್ಮಾಯಿ, ಕಟೀಲ್ ಸ್ವಾಗತ:ಅಧಿಕೃತವಾಗಿ ರಾಜ್ಯದ ಪ್ರಾದೇಶಿಕ ಪಕ್ಷ ಜಾತ್ಯತೀತ ಜನತಾದಳ ಎನ್​ಡಿಎ ಒಕ್ಕೂಟ ಸೇರಿರುವುದಕ್ಕೆ ರಾಜ್ಯ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸ್ವಾಗತ ಕೋರಿದ್ದಾರೆ.

''ಪ್ರಧಾನಿ ಮೋದಿ ನೇತೃತ್ವದಲ್ಲಿ ಎನ್​ಡಿಎ ದೇಶಾದ್ಯಂತ ದೊಡ್ಡದಾಗಿ, ಬಲಿಷ್ಠವಾಗಿ ಮತ್ತು ಅತ್ಯಂತ ವಿಶ್ವಾಸಾರ್ಹ ರಾಜಕೀಯ ಒಕ್ಕೂಟವಾಗಿ ಬೆಳೆಯುತ್ತಲೇ ಇದೆ. ಎನ್​ಡಿಎ ಕುಟುಂಬಕ್ಕೆ ಜೆಡಿಎಸ್ ಅನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ನಾವು ಒಟ್ಟಾಗಿ ಬಲಿಷ್ಠ ಎನ್‌ಡಿಎ ಮತ್ತು ನವ ಭಾರತವನ್ನು ನಿರ್ಮಿಸುತ್ತೇವೆ'' ಎಂದು ಯಡಿಯೂರಪ್ಪ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

''ಜೆಡಿಎಸ್ ಪಕ್ಷವು ಎನ್​ಡಿಎ ಭಾಗವಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಜೆಡಿಎಸ್ ನಾಯಕರಾದ ಕುಮಾರಸ್ವಾಮಿ, ಎಚ್. ಡಿ. ರೇವಣ್ಣ ಅವರಿಗೂ ಸ್ವಾಗತ. ಇದೇ ಸಂದರ್ಭದಲ್ಲಿ ಮಾಜಿ ಪ್ರದಾನಿ ಹೆಚ್.ಡಿ. ದೇವೇಗೌಡ ಅವರ ಮಾರ್ಗದರ್ಶನ ಮತ್ತು ಆಶೀರ್ವಾದ ಇದಕ್ಕೆ ದೊರಕುತ್ತದೆ ಎಂಬ ವಿಶ್ವಾಸ ಇದೆ'' ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಎಕ್ಸ್​ನಲ್ಲಿ ತಿಳಿಸಿದ್ದಾರೆ.

''ಜಾತ್ಯತೀತ ಜನತಾದಳ ಪಕ್ಷವು ಇಂದು 'ನವ ಭಾರತ, ಬಲಿಷ್ಠ ಭಾರತ'ಕ್ಕಾಗಿ ನಮ್ಮ ಎನ್​ಡಿಎ ಮೈತ್ರಿಕೂಟದ ಭಾಗವಾಗಲು ನಿರ್ಧರಿಸಿರುವುದು ಸಂತಸದ ಸಂಗತಿ. ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಎನ್​ಡಿಎ ಮೈತ್ರಿಕೂಟ ಸೇರಿದ್ದನ್ನು ನಾನು ಸಂತಸದಿಂದ ಸ್ವಾಗತಿಸುತ್ತೇನೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಕ್ಸ್​ನಲ್ಲಿ ಬರೆದಿದ್ದಾರೆ.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಪ್ರತಿಕ್ರಿಯೆ:ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, 'ಎನ್‌ಡಿಎ ಬಲಿಷ್ಠಗೊಳಿಸಲು ಜೆಡಿಎಸ್ ಇಂದು ಔಪಚಾರಿಕವಾಗಿ ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗಿದೆ. ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಸೀಟು ಹಂಚಿಕೆ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ತೀರ್ಮಾನಿಸಲಿದೆ'' ಎಂದು ಹೇಳಿದ್ದಾರೆ.

ಇದನ್ನೂ ಓದಿ:ನಾರಿ ಶಕ್ತಿ ವಂದನ ಅಧಿನಿಯಮ್ ನವಭಾರತದ ಪ್ರಜಾಪ್ರಭುತ್ವ ಬದ್ಧತೆಯ ಸಂಕೇತ: ಪ್ರಧಾನಿ ಮೋದಿ

Last Updated : Sep 22, 2023, 8:04 PM IST

ABOUT THE AUTHOR

...view details