ಚೆನ್ನೈ : ಬಿಜೆಪಿ ಐಟಿ ವಿಭಾಗದ ಮಾಜಿ ರಾಜ್ಯ ಕಾರ್ಯದರ್ಶಿ ದಿಲೀಪ್ ಕಣ್ಣನ್ ಪಕ್ಷ ತೊರೆದು ಎಐಎಡಿಎಂಕೆ ಸೇರ್ಪಡೆಯಾಗಿದ್ದಾರೆ. ಮಂಗಳವಾರ ಬಿಜೆಪಿ ತೊರೆದು ಎಐಎಡಿಎಂಕೆ ಸೇರಿದ ಕಾರ್ಯಕರ್ತರಲ್ಲಿ ಇವರೂ ಸೇರಿದ್ದಾರೆ. ಕಣ್ಣನ್ ಮತ್ತು ಓರ್ವ ಮಹಿಳಾ ಪದಾಧಿಕಾರಿ ಸೇರಿದಂತೆ ಬಿಜೆಪಿಯ ಮೂವರು ಎಐಎಡಿಎಂಕೆ ಯ ಹಂಗಾಮಿ ಪ್ರಧಾನ ಕಾರ್ಯದರ್ಶಿ ಕೆ ಪಳನಿಸ್ವಾಮಿ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದರು. ಬಿಜೆಪಿ ಪಕ್ಷದ ತಮಿಳುನಾಡು ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿಯ ಆಗಿನ ರಾಜ್ಯ ಐಟಿ ವಿಭಾಗದ ಮುಖ್ಯಸ್ಥ ಸಿಟಿಆರ್ ನಿರ್ಮಲ್ ಕುಮಾರ್ ಪಕ್ಷ ತೊರೆದು ಎಐಎಡಿಎಂಕೆಗೆ ಸೇರಿದ್ದರು. ಅದಾಗಿ ಕೆಲ ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.
ಸಿಟಿಆರ್ ನಿರ್ಮಲ್ ಕುಮಾರ್ ಎಐಎಡಿಎಂಕೆ ಸೇರ್ಪಡೆ: ಬಿಜೆಪಿಯ ತಮಿಳುನಾಡು ಐಟಿ ವಿಭಾಗದ ಮುಖ್ಯಸ್ಥ ಸಿಟಿಆರ್ ನಿರ್ಮಲ್ ಕುಮಾರ್ ಭಾನುವಾರ ಪಕ್ಷದ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ವಿರುದ್ಧ ವಾಗ್ದಾಳಿ ನಡೆಸಿ ಪಕ್ಷವನ್ನು ತೊರೆದಿದ್ದಾರೆ. ತಮ್ಮ ರಾಜೀನಾಮೆ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಅವರು ಎಐಎಡಿಎಂಕೆ ಹಂಗಾಮಿ ಮುಖ್ಯಸ್ಥ ಕೆ ಪಳನಿಸ್ವಾಮಿ ಅವರನ್ನು ಭೇಟಿಯಾಗಿ ಎಐಎಡಿಎಂಕೆ ಸೇರ್ಪಡೆಗೊಂಡರು. ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪಕ್ಷದ ರಾಜ್ಯ ನಾಯಕತ್ವವು ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದಾರೆ ಮತ್ತು ಅಣ್ಣಾಮಲೈ ಅವರು ಹಲವರ ವಿರುದ್ಧ ಕಣ್ಗಾವಲಿಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಆರೋಪವನ್ನು ಅಣ್ಣಾಮಲೈ ನಿಕಟವರ್ತಿ ನಿರಾಕರಿಸಿದ್ದಾರೆ. ನಿರ್ಮಲ್ ಕುಮಾರ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅಣ್ಣಾಮಲೈ ಅವರ ನಿಕಟವರ್ತಿ ಅಮರ್ ಪ್ರಸಾದ್ ರೆಡ್ಡಿ "ಕಣ್ಗಾವಲು" ಆರೋಪವನ್ನು "ಆಧಾರರಹಿತ" ಎಂದು ಸಾರಾಸಗಟಾಗಿ ತಿರಸ್ಕರಿಸಿದ್ದರು.