ಕೋಲ್ಕತ್ತಾ: ಪಶ್ಚಿಮ ಬಂಗಾಳ ಸರ್ಕಾರವು ಕೇಂದ್ರದ ಯೋಜನೆಗಳನ್ನು ರಾಜ್ಯದಲ್ಲಿ ಜಾರಿ ಮಾಡಿಲ್ಲ ಎಂದು ದೂಷಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ.
ಅಮಿತ್ ಶಾ ಸುಳ್ಳಿನ ಸರಮಾಲೆಯನ್ನೇ ಹೆಣೆದಿದ್ದಾರೆ. ನಮ್ಮ ರಾಜ್ಯವು ಉದ್ಯಮದಲ್ಲಿ 'ಶೂನ್ಯ' ಎಂದು ಹೇಳಿದ್ದಾರೆ. ಆದರೆ ನಾವು ಎಂಎಸ್‌ಎಂಇ (ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆ) ವಲಯದಲ್ಲಿ ಪ್ರಥಮ ಸ್ಥಾನದಲ್ಲಿದ್ದೇವೆ. ನಮಗೆ ಗ್ರಾಮೀಣ ರಸ್ತೆಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ಆದರೆ ಭಾರತ ಸರ್ಕಾರದ ಮಾಹಿತಿಯ ಪ್ರಕಾರ ನಾವು ಅದರಲ್ಲಿ ಪ್ರಥಮ ಸ್ಥಾನದಲ್ಲಿದ್ದೇವೆ ಎಂದು ಮಮತಾ ಬ್ಯಾನರ್ಜಿ ಇಂದು ಸುದ್ದಿಗೋಷ್ಠಿಯಲ್ಲಿ ಪ್ರತ್ಯುತ್ತರ ನೀಡಿದರು.
ಇದನ್ನೂ ಓದಿ:'ಮಾ, ಮತಿ, ಮನುಷ್' ಘೋಷಣೆ ಬಾಕಿ ಉಳಿದಿಲ್ಲ, ಟಿಎಂಸಿ ಕುಟುಂಬ ಪಕ್ಷವಾಗಿ ಮಾರ್ಪಟ್ಟಿದೆ: ಅಮಿತ್ ಶಾ
ಬಿಜೆಪಿ ಒಂದು 'ವಂಚಕರ ಪಕ್ಷ', ರಾಜಕೀಯಕ್ಕಾಗಿ ಅವರು ಏನು ಬೇಕಾದರೂ ಮಾಡುತ್ತಾರೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಕಾನೂನಾಗಿ ಅಂಗೀಕರಿಸಿದಾಗಿನಿಂದ ನಾವು ಅದನ್ನು ವಿರೋಧಿಸುತ್ತಿದ್ದೇವೆ. ಬಿಜೆಪಿಯವರು ನಾಗರಿಕರ ಭವಿಷ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ಮೊದಲು ತಮ್ಮ ಭವಿಷ್ಯವನ್ನು ನಿರ್ಧರಿಸಿಕೊಳ್ಳಲಿ. ನಾವು ಎಂದಿಗೂ ಸಿಎಎ, ಎನ್‌ಪಿಆರ್ ಮತ್ತು ಎನ್‌ಆರ್‌ಸಿ ವಿರುದ್ಧವಾಗಿಯೇ ಇರುತ್ತೇವೆ ಎಂದು ದೀದಿ ಸ್ಪಷ್ಟಪಡಿಸಿದರು.
ನಾನು ಡಿಸೆಂಬರ್ 28ರಂದು ಆಡಳಿತ ಸಭೆಗಾಗಿ ಬಿರ್ಭುಮ್‌ಗೆ ಹೋಗುತ್ತಿದ್ದೇನೆ. ಡಿ. 29ರಂದು ರ‍್ಯಾಲಿ ನಡೆಸುತ್ತೇನೆ ಎಂದು ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.