ಕೋಲ್ಕತ್ತಾ (ಪಶ್ಚಿಮ ಬಂಗಾಳ): ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉಂಟಾದ ಹಿಂಸಾಚಾರ ಹಾಗೂ ಸಾವು-ನೋವಿನ ಬಗ್ಗೆ ಬಿಜೆಪಿ ಸತ್ಯಶೋಧನಾ ತಂಡವು ರಾಜ್ಯಪಾಲರಿಗೆ ತನ್ನ ವರದಿಯನ್ನು ಸಲ್ಲಿಸಿದೆ. ರಾಜ್ಯದಲ್ಲಿ ಚುನಾವಣೆಯ ಹಿಂಸಾಚಾರದ ಬಗ್ಗೆ ಪೊಲೀಸ್ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ತಂಡವು ಮನವಿ ಮಾಡಿದೆ.
ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಆದರೆ, ಚುನಾವಣೆ ಘೋಷಣೆಯಾದ ನಂತರ ಹಿಂಸಾಚಾರ ಭುಗಿಲೆದ್ದಿತ್ತು. ಇದರಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಹಿಂಸಾಚಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ತಮ್ಮ ಪಕ್ಷದಿಂದ ಸತ್ಯಶೋಧನಾ ತಂಡವನ್ನು ರಚಿಸಿದ್ದರು. ಈ ತಂಡ ಜುಲೈ 12ರಂದು ಕೋಲ್ಕತ್ತಾಗೆ ಆಗಮಿಸಿತ್ತು.
ಶುಕ್ರವಾರ ಕೇಂದ್ರದ ಮಾಜಿ ಸಚಿವ ರವಿಶಂಕರ್ ಪ್ರಸಾದ್ ಅವರನ್ನೊಳಗೊಂಡ ಸತ್ಯಶೋಧನಾ ತಂಡವು ರಾಜ್ಯಪಾಲ ಸಿವಿ ಆನಂದ ಬೋಸ್ ಅವರನ್ನು ಭೇಟಿ ಮಾಡಿತು. ರಾಜ್ಯದಲ್ಲಿ 355ನೇ ವಿಧಿಯನ್ನು ಜಾರಿಗೊಳಿಸುವ ರಾಜ್ಯ ಬಿಜೆಪಿ ಘಟಕದ ಬೇಡಿಕೆಯು ಸಮರ್ಥನೀಯ ಎಂದು ಸತ್ಯಶೋಧನಾ ತಂಡ ಹೇಳಿದೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರವಿಶಂಕರ್ ಪ್ರಸಾದ್, ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಯ ವೇಳೆ ದಾಳಿಗೊಳಗಾದ ಜನರ ಮನೆಗಳಲ್ಲಿ ನೋವಿನ ಸನ್ನಿವೇಶಗಳು ಕಂಡುಬಂದವು. ಇದು ದುರದೃಷ್ಟಕರ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ಮಹಿಳೆಯರು, ಮಕ್ಕಳು, ವೃದ್ಧರು ಯಾರನ್ನೂ ಬಿಡದೆ ದಾಳಿ ಮಾಡಲಾಗಿದೆ. ರಾಜ್ಯದ ಜನತೆ ಜನರು ಭಯಭೀತರಾಗಿದ್ದಾರೆ. ಆದರೆ, ಆರೋಪಿಗಳ ವಿರುದ್ಧ ಪೊಲೀಸರಿಂದ ಇದುವರೆಗೆ ಯಾವುದೇ ಕ್ರಮ ಆಗಿಲ್ಲ. ಸಿಸಿಟಿವಿಗಳು ಸೇರಿ ಎಲ್ಲ ಸಾಕ್ಷ್ಯಗಳನ್ನು ನಾಶ ಮಾಡಲಾಗಿದೆ. ನಾವು ರಾಜ್ಯಪಾಲರನ್ನು ಭೇಟಿ ಮಾಡಿ ಈ ಬಗ್ಗೆ ಪೊಲೀಸ್ ಕ್ರಮಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಬುಧವಾರ ಮಾತನಾಡಿದ್ದ ರವಿಶಂಕರ್ ಪ್ರಸಾದ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಮತ್ತು ಎಡಪಕ್ಷಗಳ ಕೇಂದ್ರ ನಾಯಕತ್ವ ಏಕೆ ಮೌನವಾಗಿದೆ ಎಂದು ಪ್ರಶ್ನಿಸಿದ್ದರು. ಮಂಗಳವಾರ ಮಾತನಾಡಿದ್ದ ರಾಜ್ಯಪಾಲ ಡಾ.ಸಿ.ವಿ.ಆನಂದ ಬೋಸ್, ಪಂಚಾಯತ್ ಚುನಾವಭೆ ವೇಳೆ ನಡೆದ ಹಿಂಸಾಚಾರದ ಘಟನೆಗಳನ್ನು ಖಂಡಿಸಿದ್ದರು. ಪಶ್ಚಿಮ ಬಂಗಾಳಕ್ಕೆ ಹಿಂಸಾಚಾರ ಮತ್ತು ಭ್ರಷ್ಟಾಚಾರ ಎಂಬ ಇಬ್ಬರು ಶತ್ರುಗಳಿದ್ದು, ರಾಜಕೀಯ ಪಕ್ಷಗಳು ಇವುಗಳ ವಿರುದ್ಧ ಹೋರಾಡಬೇಕೆಂದು ಅವರು ಹೇಳಿದ್ದರು.
ಇದನ್ನೂ ಓದಿ:ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಯಲ್ಲಿ ಟಿಎಂಸಿಗೆ ಭರ್ಜರಿ ಗೆಲುವು; 2ನೇ ಸ್ಥಾನಕ್ಕೆ ಬಿಜೆಪಿ, ಕಾಂಗ್ರೆಸ್, ಎಡರಂಗ ಪೈಪೋಟಿ