ನವದೆಹಲಿ :ಕರ್ನಾಟಕದ ಹೆಚ್ಚಿನ ಭಾಗಗಳು ಮಳೆ ಕೊರತೆಯಿಂದಾಗಿ ಬರಗಾಲಕ್ಕೆ ತುತ್ತಾಗಿವೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ 'ಇಂಡಿಯಾ' ಮೈತ್ರಿಕೂಟದ ಮಿತ್ರಪಕ್ಷವಾದ ಡಿಎಂಕೆ ಒತ್ತಡಕ್ಕೆ ಮಣಿದು ತಮಿಳುನಾಡಿಗೆ 10 ಟಿಎಂಸಿ ನೀರು ಬಿಟ್ಟಿದೆ ಎಂದು ಬಿಜೆಪಿ ಟೀಕಿಸಿದೆ.
ಕಾವೇರಿ ನದಿಯಿಂದ ತಮಿಳುನಾಡಿಗೆ 10 ಟಿಎಂಸಿ ನೀರು ಬಿಟ್ಟಿದ್ದಕ್ಕೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ, ಕಾಂಗ್ರೆಸ್ ತನ್ನ ಮಿತ್ರಪಕ್ಷ ಡಿಎಂಕೆ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದೆ. ರಾಜ್ಯವೇ ಬರಗಾಲದಲ್ಲಿದ್ದಾಗ ಇಲ್ಲಿನ ಜನರನ್ನು ಲೆಕ್ಕಿಸದೇ ಆ ರಾಜ್ಯಕ್ಕೆ ನೀರು ಹರಿಸಿದೆ ಎಂದು ಆರೋಪಿಸಿತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಕರ್ನಾಟಕವೇ ಬರಗಾಲದಲ್ಲಿದ್ದಾಗ, ಕಾಂಗ್ರೆಸ್ ಸರ್ಕಾರ ಇತರ ಪಕ್ಷಗಳೊಂದಿಗೆ ಸಮಾಲೋಚಿಸದೆ ನೀರು ಬಿಡಲು ನಿರ್ಧರಿಸಿರುವುದು ರೈತರ ಸಂಕಷ್ಟಕ್ಕೆ ಕಾರಣವಾಗಲಿದೆ. ರಾಜ್ಯದಲ್ಲಿ 50 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯುತ್ ಲೋಡ್ ಶೆಡ್ಡಿಂಗ್‌ನಿಂದ ಕೃಷಿಗೆ ಹೊಡೆತ ಬಿದ್ದಿದೆ. ಆದರೂ ತಮಿಳುನಾಡಿಗೆ ನೀರು ಬಿಡಲಾಗಿದೆ ಎಂದು ಸಚಿವರು ಹೇಳಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ದುರಾಡಳಿತ, ಅಭಿವೃದ್ಧಿಹೀನ ಮತ್ತು ಭ್ರಷ್ಟಾಚಾರದಿಂದ ಕೂಡಿದೆ ಎಂದು ಆರೋಪಿಸಿದ ಸಚಿವರು, ಇಲ್ಲಿನ ಜನರನ್ನು ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ರಾಜಕಾರಣ ಮಾಡುವುದರಲ್ಲಿಯೇ ನಿರತವಾಗಿದ್ದು, ಮಿತ್ರಪಕ್ಷಕ್ಕಾಗಿ ರಾಜ್ಯದ ರೈತರಿಗೆ ಬರೆ ಎಳೆದಿದೆ ಎಂದು ದೂರಿದರು.