ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದ್ದು, ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕಳಪೆ ಸಾಧನೆ ತೋರಿದ್ದರಿಂದಲೇ ತೈಲ ಬೆಲೆ ಇಳಿಸುವ ನಿರ್ಧಾರಕ್ಕೆ ಬಂದಿದೆ ಎಂದು ಆರೋಪಿಸಿದೆ.
ಲೋಕಸಭೆಯ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೊಯ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಉಚಿತವಾಗಿ ಕೋವಿಡ್ ಲಸಿಕೆ ನೀಡಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು ಹೆಚ್ಚಿಸಲಾಗಿದೆ ಎಂದು ಹಲವು ತಿಂಗಳುಗಳಿಂದ ಹೇಳಿಕೊಂಡು ಬಂದ ಬಿಜೆಪಿ ತಮ್ಮ ಬೂಟಾಟಿಕೆ ಪ್ರದರ್ಶಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ತೈಲ ಬೆಲೆ ಕೊಂಚ ಇಳಿಕೆಯಾಗಿರುವುದು ದೇಶದ ಜನರಿಗೆ ಸಣ್ಣ ರಿಲೀಫ್ ಸಿಕ್ಕಿದೆ ಅಂತ ಹೇಳಿದ್ದಾರೆ.
ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೇವಾಲ, ಟ್ಯಾಕ್ಸ್-ಪರಾವಲಂಬಿ ಮೋದಿ ಸರ್ಕಾರಕ್ಕೆ ಸತ್ಯದ ಕನ್ನಡಿ ತೋರಿಸಿದ್ದಕ್ಕಾಗಿ ಜನರಿಗೆ ಅಭಿನಂದನೆಗಳು! ಆದರೆ ನೆನಪಿಡಿ - 14 ಉಪಚುನಾವಣೆಗಳು ಮತ್ತು 2 ಲೋಕಸಭೆಗಳಲ್ಲಿ ಸೋತ ನಂತರ ಲೀಟರ್ ಮೇಲೆ ಪೆಟ್ರೋಲ್ 5 ರೂ., ಡೀಸೆಲ್ ಮೇಲೆ 10 ರೂಪಾಯಿ ಇಳಿಸಿ ಮೋದಿಜಿ ದೀಪಾವಳಿ ಉಡುಗೊರೆಯಾಗಿ ನೀಡಿದ್ದಾರೆ ಎಂದು ಸರಣಿ ಟ್ವೀಟ್ ಮಾಡಿದ್ದಾರೆ. 2014ರ ಮೇನಲ್ಲಿ ಪೆಟ್ರೋಲ್ 71.41 ರೂ., ಡೀಸೆಲ್ 55.49 ರೂ. ಆದರೆ ಕಚ್ಚಾ ತೈಲ ಬ್ಯಾಲರ್‌ಗೆ 105.71 ಇತ್ತು ಎಂದಿದ್ದಾರೆ.
ಸದ್ಯ ಅಬಕಾರಿ ಸುಂಕ ಕಡಿತಗೊಳಿಸಿದ ನಂತರ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 110.04 ರಿಂದ 103.97 ರೂ.ಗೆ ಇಳಿದಿದೆ. 98.42 ರೂಪಾಯಿ ಇದ್ದ ಲೀಟರ್ ಡೀಸೆಲ್ 86.67ಕ್ಕೆ ತಲುಪಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ 115.85 ರಿಂದ Rs109.98 ಕ್ಕೆ ಇಳಿದರೆ, ಡೀಸೆಲ್ ಲೀಟರ್‌ಗೆ 106.62 ರಿಂದ 94.14ಕ್ಕೆ ತಗ್ಗಿದೆ. ದೇಶದ ಎಲ್ಲಾ ಮಹಾನಗರಗಳಿಗಿಂತ ಇದು ಅಧಿಕವಾಗಿದೆ.
ಇಂದಿನಿಂದ ಜಾರಿಗೆ ಬರುವಂತೆ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 5 ರೂ. ಹಾಗೂ ಡೀಸೆಲ್ ಮೇಲೆ 10 ರೂ. ಅಬಕಾರಿ ಸುಂಕವನ್ನು ಕಡಿತಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಬುಧವಾರ ಘೋಷಿಸಿತ್ತು.