ಗುವಾಹಟಿ (ಅಸ್ಸೋಂ) : ಭಾರತೀಯ ಜನತಾ ಪಕ್ಷವು ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಹೊರಟಿದೆ. ಆದರೆ, ಇದು ಎಂದಿಗೂ ಸಾಧ್ಯವಿಲ್ಲ ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಹೇಳಿದೆ. ಕೇವಲ ವೋಟ್ ಬ್ಯಾಂಕ್ಗಾಗಿ ಬಿಜೆಪಿ ಈ ಕಾಯ್ದೆ ಬಗ್ಗೆ ಕೇಳಿಕೊಂಡು ಬರುತ್ತಿದೆ. ಆದರೆ, ಈ ಕಾನೂನನ್ನು ಜಾರಿಗೆ ತರಲು ಸಾಧ್ಯವಿಲ್ಲ ಅನ್ನೋದರ ಬಗ್ಗೆ ಬಿಜೆಪಿ ನಾಯಕರಿಗೂ ಗೊತ್ತಿದೆ ಎಂದು ಎಐಯುಡಿಎಫ್ ಶಾಸಕ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ರಫೀಕುಲ್ ಇಸ್ಲಾಂ ಹೇಳಿದ್ದಾರೆ.
ಭಾರತದಲ್ಲಿ ನೂರಾರು ಜಾತಿ ಮತ್ತು ಸಮುದಾಗಳಿವೆ. ಇದು ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ. ಬೇರೆ ಬೇರೆ ಜಾತಿ - ಧರ್ಮಗಳಿದ್ದರೂ ಅವುಗಳು ಅದರದ್ದೇ ಆದ ಹಕ್ಕುಗಳನ್ನು ಹೊಂದಿವೆ. ಸಂವಿಧಾನದಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ. ಹಾಗಾಗಿ ಏಕರೂಪ ನಾಗರಿಕ ಸಂಹಿತೆ ತರುವ ಅಗತ್ಯವಿಲ್ಲ. ವೋಟಿಗಾಗಿ ಬಿಜೆಪಿ ಹಾಗೆ ಹೇಳಿಕೊಂಡು ಬರುತ್ತಿದೆ.
ಗೋವಾ, ಮೇಘಾಲಯ, ಅರುಣಾಚಲ ಪ್ರದೇಶ, ಮಿಜೋರಾಂ, ಕೇರಳ, ಚೆನ್ನೈ, ಬೆಂಗಳೂರಿನಲ್ಲಿ ಇದನ್ನು ಜಾರಿಗೆ ತರಲು ಸಾಧ್ಯವೇ ಇಲ್ಲ. ಬಿಜೆಪಿಗೂ ಅದು ಚೆನ್ನಾಗಿ ಗೊತ್ತಿದೆ. ಗುಜರಾತ್ ಚುನಾವಣೆಗೂ ಮುನ್ನ ಏಕರೂಪ ನಾಗರಿಕ ಸಂಹಿತೆ ತರುವುದಾಗಿ ಹೇಳಿದ್ದರು. ಅದೇ ರೀತಿ ಉತ್ತರಾಖಂಡದಲ್ಲೂ ಅದನ್ನೇ ಹೇಳಿ ನಿರ್ಣಯ ಕೈಗೊಂಡು ಮಸೂದೆ ಕೂಡ ಅಂಗೀಕರಿಸಿದ್ದರು. ಆದರೆ, ಅದನ್ನು ಈವರೆಗೂ ಜಾರಿಗೆ ತಂದಿಲ್ಲ, ಏಕೆ? ಎಂದು ಪ್ರಶ್ನಿಸಿದ ಅವರು, ಉತ್ತರಪ್ರದೇಶದಲ್ಲೂ ಇದೇ ರೀತಿಯ ಘಟನೆ ನಡೆದಿದೆ ಎಂದು ಬಿಜೆಪಿ ನಿಲುವುಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಭಾರತ ಬೇರೆ ಬೇರೆ ಜಾತಿ, ಧರ್ಮ ಮತ್ತು ಸಮುದಾಯ ಹೊಂದಿರುವ ದೇಶ. ಹಾಗೆಯೇ, ವಿಭಿನ್ನ ಆಚರಣೆ, ಸಂಪ್ರದಾಯಗಳಿವೆ. ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದರೆ ದೇಶದ ಮೇಲೆ ಪರಿಣಾಮ ಬೀರುತ್ತದೆ. ಇದು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ತರುತ್ತಿರುವ ಕಾನೂನು ಎಂದು ಅವರು ಹೇಳಿದರು.
ಇದನ್ನೂ ಓದಿ:ಖರ್ಗೆ ಅವರಿಗೆ ಪಕ್ಷ ಅಧಿಕಾರಕ್ಕೆ ತರುತ್ತೇನೆ ಎಂದು ಮಾತುಕೊಟ್ಟಿದ್ದೆ, ಯಾರ ಕ್ಲೇಮ್ ಬಗ್ಗೆಯೂ ಮಾತಾಡಲ್ಲ: ಡಿಕೆಶಿ