ಜಾಮ್‌ನಗರ(ಗುಜರಾತ್):ಜಾಮ್‌ನಗರ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ರಿವಾಬಾ ಜಡೇಜಾ ಆರಂಭದಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಅಭ್ಯರ್ಥಿಯ ಎದುರು ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಆದರೆ ಬಳಿಕ ಪ್ರತಿ ಸುತ್ತಿನಲ್ಲೂ ಮುನ್ನಡೆ ಪಡೆದುಕೊಂಡರು. ಅಂತಿಮವಾಗಿ ರಿವಾಬಾ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕರಷಣಬಾಯಿ ಕರಮುರ್ ಅವರನ್ನು 50 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸಿ ಗೆಲುವಿನ ನಗೆ ಬೀರಿದರು.
'ನನ್ನನ್ನು ಅಭ್ಯರ್ಥಿಯಾಗಿ ಸ್ವೀಕರಿಸಿದವರು, ಜನರನ್ನು ತಲುಪುವಲ್ಲಿ ಸಹಕರಿಸಿದವರು ಹಾಗೂ ನನ್ನ ಗೆಲುವಿಗಾಗಿ ಕೆಲಸ ಮಾಡಿದವರಿಗೆಲ್ಲರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ. ಇದು ನನ್ನೊಬ್ಬಳ ಗೆಲುವಲ್ಲ, ನಮ್ಮೆಲ್ಲರ ಗೆಲುವು' ಎಂದು ರಿವಾಬಾ ಜಡೇಜಾ ಗೆಲುವಿನ ಖುಷಿಯನ್ನು ಹಂಚಿಕೊಂಡಿದ್ದಾರೆ.