ಕರ್ನಾಟಕ

karnataka

ETV Bharat / bharat

ಉತ್ತರಾಖಂಡದಲ್ಲಿ 2ನೇ ಬಾರಿ ಕಮಲ ಅರಳಿದ್ದು ಹೇಗೆ?: ಕಾಂಗ್ರೆಸ್ ವೈಫಲ್ಯಕ್ಕೆ ಕಾರಣಗಳಿವು.. - ಉತ್ತರಾಖಂಡದಲ್ಲಿ ಕಾಂಗ್ರೆಸ್ ವಿಫಲತೆಗೆ ಕಾರಣಗಳು

ಕೆಲವು ಮತದಾನೋತ್ತರ ಸಮೀಕ್ಷೆಗಳು ಉತ್ತರಾಖಂಡದಲ್ಲಿ ರಾಜಕೀಯ ಅತಂತ್ರ ಸ್ಥಿತಿ ಏರ್ಪಡುತ್ತವೆ ಎಂದು ಭವಿಷ್ಯ ನುಡಿದಿದ್ದವು. ಆದರೆ ಇನ್ನೂ ಕೆಲ ಸಮೀಕ್ಷೆಗಳು ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತವೆ ಎಂದು ಹೇಳಿದ್ದು, ಈಗ ನಿಜವಾಗಿದೆ.

bjp came to power in uttarakhand for the consecutive second time
ಉತ್ತರಾಖಂಡದಲ್ಲಿ ಎರಡನೇ ಬಾರಿ ಅರಳಿದ ಕಮಲ: ಕಾಂಗ್ರೆಸ್ ವಿಫಲತೆಗೆ ಕಾರಣವೇನು?

By

Published : Mar 10, 2022, 5:27 PM IST

Updated : Mar 10, 2022, 6:02 PM IST

ದೇವಭೂಮಿ ಉತ್ತರಾಖಂಡದಲ್ಲಿ ಎರಡನೇ ಬಾರಿಗೆ ಬಿಜೆಪಿ ಜಯಭೇರಿ ಬಾರಿಸಿದೆ. ರಾಜಕೀಯ ಏರಿಳಿತಗಳು, ಮುಖ್ಯಮಂತ್ರಿಗಳ ಬದಲಾವಣೆ, ಆಪ್ ಪಕ್ಷದ ಪ್ರಭಾವ, ಕಾಂಗ್ರೆಸ್​ನ ಪುನರ್​ಬೆಳವಣಿಗೆಯ ಸಾಧ್ಯತೆಯ ಹೊರತಾಗಿಯೂ ಕಮಲ ಅರಳಿದೆ.

ರಾಜ್ಯದಲ್ಲಿ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿದ್ದು, 36 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಪಕ್ಷ ಬಹುಮತದಿಂದ ಅಧಿಕಾರ ಹಿಡಿಯುತ್ತದೆ. ಆದರೆ ಬಿಜೆಪಿ ಈಗಾಗಲೇ ಬಹುಮತದ ಗಡಿರೇಖೆ ದಾಟಿ ಮುನ್ನುಗ್ಗಿರುವುದು ಮಾತ್ರವಲ್ಲದೇ, ಕಾಂಗ್ರೆಸ್ ವಶದಲ್ಲಿರುವ ಮತ್ತಷ್ಟು ಕ್ಷೇತ್ರಗಳನ್ನು ತನ್ನೆಡೆಗೆ ಸೆಳೆದುಕೊಂಡಿದೆ. ಇದು ನೇರಾನೇರ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಹೋರಾಟವಾಗಿದ್ದು, ಉಳಿದ ಪಕ್ಷಗಳು ನೆಪಮಾತ್ರದಲ್ಲಿವೆ.


ಪ್ರಮುಖರ ಜಯ-ಪರಾಜಯ:ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಸೋಲು-ಗೆಲುವುಗಳನ್ನು ನೋಡುವುದಾದರೆ.. ಅತ್ಯಂತ ಮುಖ್ಯವಾಗಿ ಉತ್ತರಾಖಂಡ ಸಿಎಂ ಆಗಿದ್ದ ಪುಷ್ಕರ್ ಸಿಂಗ್ ಧಾಮಿ ಸೋಲು ಅನುಭವಿಸಿದ್ದಾರೆ. ಖತಿಮಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಧಾಮಿ ಕಾಂಗ್ರೆಸ್ ಅಭ್ಯರ್ಥಿ ಭುವನ್ ಕಾಪ್ರಿ ವಿರುದ್ಧ ಸುಮಾರು 7 ಮತಗಳ ಅಂತರದಿಂದ ಸೋಲುಂಡರು.

ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಹರೀಶ್ ರಾವತ್ ಅವರು ಲಾಲ್ಕುವಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಮೋಹನ್ ಸಿಂಗ್ ಬಿಶ್ತ್ ವಿರುದ್ಧ ಪರಾಭವಗೊಂಡಿದ್ದಾರೆ. ರಾವತ್ ಅವರು ಸುಮಾರು 14,000 ಮತಗಳ ಅಂತರದಿಂದ ಪರಾಜಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇವರ ಪುತ್ರಿ ಪುತ್ರಿ ಅನುಪಮಾ ರಾವತ್ ಹರಿದ್ವಾರ ಗ್ರಾಮಾಂತರ ಕ್ಷೇತ್ರದಿಂದ ಗೆದ್ದಿದ್ದಾರೆ. ಮಸ್ಸೂರಿಯಿಂದ ಬಿಜೆಪಿ ಶಾಸಕ ಗಣೇಶ್ ಜೋಶಿ, ರಿಷಿಕೇಶ್‌ ಕ್ಷೇತ್ರದಿಂದ ಪ್ರೇಮಚಂದ್ ಅಗರ್ವಾಲ್, ಕಾಂಗ್ರೆಸ್‌ನ ಖುಶಾಲ್ ಸಿಂಗ್ ಲೋಹಘಾಟ್‌ ಕ್ಷೇತ್ರದಿಂದ ಗೆಲುವಿನ ನಗೆ ಬೀರಿದ್ದಾರೆ.

ಹರಿದ್ವಾರ ನಗರ ವಿಧಾನಸಭಾ ಕ್ಷೇತ್ರದಿಂದ ಮದನ್ ಕೌಶಿಕ್ ಗೆಲುವು ಸಾಧಿಸಿದ್ದಾರೆ. ಕಳೆದ 20 ವರ್ಷಗಳಿಂದ ಇವರ ಗೆಲುವು ಸಾಗಿದೆ. ಶಿಕ್ಷಣ ಸಚಿವ ಅರವಿಂದ್ ಪಾಂಡೆ ಗದರ್ಪುರ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ. ಜನರಲ್ಲಿ ಹೊಸ ಭರವಸೆ ಮೂಡಿಸಿದ್ದ ಆಮ್ ಆದ್ಮಿ ಪಕ್ಷ ರಾಜ್ಯದಲ್ಲಿ ಹೇಳ ಹೆಸರಿಲ್ಲದಂತಾಗಿದೆ. ಸಿಎಂ ಪುಷ್ಕರ್ ಸಿಂಗ್ ಧಾಮಿ ಸೋಲು ಅನುಭವಿಸಿದರೂ, ನಿರೀಕ್ಷೆಗೂ ಮೀರಿದ ಗೆಲುವು ಸಾಧಿಸಿರುವ ಬಿಜೆಪಿ ಸಾಧನೆಗೆ ಕಾರಣಗಳೇನು?

1. ಬಿಜೆಪಿ vs ದುರ್ಬಲ ಪಕ್ಷಗಳು:2012ರಿಂದ 2016ರವರೆಗೆ ಉತ್ತರಾಖಂಡದಲ್ಲಿ ಕಾಂಗ್ರೆಸ್ ಅಧಿಕಾರಲ್ಲಿತ್ತು. ಈ ಅವಧಿಯಲ್ಲಿ ರಾಷ್ಟ್ರಪತಿ ಆಡಳಿತವೂ ಎರಡು ಬಾರಿ ಬಂದಿತ್ತು. ರಾಷ್ಟ್ರಪತಿ ಆಡಳಿತವನ್ನು ಹೊರತುಪಡಿಸಿ, ಹರೀಶ್ ರಾವತ್ ಉತ್ತರ ಪ್ರದೇಶದ ಸಿಎಂ ಆಗಿ ಆಡಳಿತ ನಿರ್ವಹಿಸಿದ್ದರು. ಆದರೆ 2016ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬಲಿಷ್ಟವಾಗಿದ್ದ ಕಾಂಗ್ರೆಸ್ ಪಕ್ಷ ದುರ್ಬಲವಾಯಿತು. ಆಮ್ ಆದ್ಮಿ ಪಕ್ಷವೂ ಉತ್ತರಾಖಂಡದಲ್ಲಿ ನೆಲೆಯೂರಲು ಸಜ್ಜಾಗಿದ್ದು ಕೂಡಾ ಕಾಂಗ್ರೆಸ್​ಗೆ ಮಾರಕವಾಗಿ ಪರಿಣಮಿಸಿತು. ಬಿಎಸ್​ಪಿ ಕೂಡಾ ಉತ್ತರಾಖಂಡದಲ್ಲಿ ಅಲ್ಲಲ್ಲಿ ಅಸ್ತಿತ್ವವಿದ್ದು, ಬೇರೆ ಪಕ್ಷಗಳ ಮೇಲೆ ಪರಿಣಾಮ ಬೀರುವಷ್ಟು ಪ್ರಬಲವಾಗಿರಲಿಲ್ಲ.

2. ಕಾಂಗ್ರೆಸ್​​ನಲ್ಲಿ ಪ್ರಬಲ ನಾಯಕರ ಕೊರತೆ:ಸುಮಾರು ವರ್ಷಗಳಿಂದ ಉತ್ತರಾಖಂಡದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ, ಪ್ರಬಲ ನಾಯಕರನ್ನು ಹುಟ್ಟುಹಾಕಲು ಸಾಧ್ಯವಾಗಿರಲಿಲ್ಲ. ಹರೀಶ್ ರಾವತ್ ಏಕೈಕ ಪ್ರಬಲ ಕಾಂಗ್ರೆಸ್ ನಾಯಕರಾಗಿದ್ದರೂ, 2017ರ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಎರಡರಲ್ಲೂ ಸೋಲು ಕಂಡಿದ್ದ ಅವರೇ ಈ ಬಾರಿಯೂ ಅತ್ಯುನ್ನತ ನಾಯಕರಾಗಿ ಮುಂದುವರೆದಿದ್ದರು. ಬಿಜೆಪಿ ತನ್ನ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದು, ಕಾಂಗ್ರೆಸ್ ಈ ವಿಚಾರಕ್ಕೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಚುನಾವಣೆ ಮುಗಿದ ನಂತರ ನಾನೇ ಕಾಂಗ್ರೆಸ್​ನ ಸಿಎಂ ಅಭ್ಯರ್ಥಿ ಎಂದು ಹರೀಶ್ ರಾವತ್ ಘೋಷಿಸಿಕೊಂಡಿದ್ದರು. ಆದರೆ ಅವರೂ ಕೂಡಾ ಭಾರಿ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ.

3. ಬಿಜೆಪಿ ಪ್ರಣಾಳಿಕೆಗೆ ಮಾರುಹೋದರಾ ಉತ್ತರಾಖಂಡ ಮತದಾರರು?: ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷವು ತನ್ನ ಇತಿಮಿತಿಗಳಲ್ಲಿ ಕೆಲವೊಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಿತ್ತಾದರೂ, ಅದು ಜನರ ನಿರೀಕ್ಷೆಯನ್ನು ಮುಟ್ಟುವಂತಿರಲಿಲ್ಲ ಎನ್ನಲಾಗಿದೆ. ಈ ಬಾರಿ ವಿಧಾನಸಭೆಯಲ್ಲಿ ಗೆಲ್ಲುವ ಉದ್ದೇಶದೊಂದಿಗೆ ಪ್ರಣಾಳಿಕೆಯಲ್ಲಿ ಕೆಲವೊಂದು ವಿಚಾರಗಳನ್ನು ಸಾಮಾನ್ಯ ವಿಚಾರವನ್ನು ಬಿಜೆಪಿ ಪಕ್ಷ ಮಂಡನೆ ಮಾಡಿತ್ತು. ‘ವಿಷನ್ ಡಾಕ್ಯುಮೆಂಟ್ 2022’ ಎಂದು ಪ್ರಣಾಳಿಕೆಗೆ ಹೆಸರಿಡಲಾಗಿದ್ದು, ಉದ್ಯೋಗ, ಮಹಿಳೆಯರ ಸಬಲೀಕರಣ, ಮೂಲಸೌಕರ್ಯ ಅಭಿವೃದ್ಧಿ, ಪ್ರವಾಸೋದ್ಯಮ, ವಲಸೆ ನಿರ್ಮೂಲನೆ, ತೋಟಗಾರಿಕೆ ಮತ್ತು ಡೈರಿ ಅಭಿವೃದ್ಧಿಗೆ ಹೊಸ ಒತ್ತು ನೀಡುವುದಾಗಿ ಪ್ರಣಾಳಿಕೆಯಲ್ಲಿ ಉಲ್ಲೇಖ ಮಾಡಲಾಗಿತ್ತು.

ಲವ್ ಜಿಹಾದ್ ಕಾಯ್ದೆಯನ್ನು ಬಲಪಡಿಸಲು, ಶಿಕ್ಷೆಯ ಗುಣಮಟ್ಟವನ್ನು ಹೆಚ್ಚು ಮಾಡುವುದಾಗಿಯೂ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಘೋಷಣೆ ಮಾಡಿತ್ತು. ಡಿಸೆಂಬರ್ ವೇಳೆಗೆ ಚಾರ್ ಧಾಮ್ ಹೆದ್ದಾರಿ ಯನ್ನು ಪೂರ್ಣಗೊಳಿಸಲಾಗುವುದು ಎಂಬ ಭರವಸೆ ನೀಡಲಾಗಿತ್ತು. ಇದು ಹಿಂದೂ ಪರ ಮತಗಳನ್ನು ಮತ್ತಷ್ಟು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ಅಂದಾಜಿಸಬಹುದು.

4. ಕಾಂಗ್ರೆಸ್ ಪ್ರಣಾಳಿಕೆ ಆಕರ್ಷಕವಾಗಿದ್ದರೂ..: ಈ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಅನಿವಾರ್ಯತೆಯಲ್ಲಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಅತ್ಯಂತ ಆಕರ್ಷಕ ಭರವಸೆಗಳನ್ನು ನೀಡಿತ್ತು. ಪೊಲೀಸ್ ಇಲಾಖೆಯಲ್ಲಿ ಮಹಿಳೆಯರಿಗೆ ಶೇಕಡಾ 40ರಷ್ಟು ಮೀಸಲಾತಿ, 4 ಲಕ್ಷ ಉದ್ಯೋಗ, 500 ರೂಪಾಯಿಗೆ ಅಡುಗೆ ಅನಿಲ ಮುಂತಾದ ಭರವಸೆಗಳು ಜನರನ್ನು ಮತಹಾಕುವಂತೆ ಮಾಡಲು ವಿಫಲವಾಗಿವೆ.

ಇದನ್ನೂ ಓದಿ:ಬಿಜೆಪಿಗೆ ಗೆಲುವು, ಸಿಎಂಗೆ ಸೋಲು! ದೇವಭೂಮಿಯಲ್ಲಿ ಮರುಕಳಿಸಿದ ವಿಚಿತ್ರ ಫಲಿತಾಂಶ!

5. ಸಿಎಂಗಳ ಬದಲಾವಣೆಗೂ ತಲೆ ಕೆಡಿಸಿಕೊಳ್ಳದ ಮತದಾರರು:ಉತ್ತರಾಖಂಡದಲ್ಲಿ ಬಿಜೆಪಿ ಆಡಳಿತವಿದ್ದರೂ ಒಂದೇ ಅವಧಿಯಲ್ಲಿ ಮೂವರು ಸಿಎಂಗಳನ್ನು ಬದಲಾವಣೆ ಮಾಡಿದ್ದು, ಜನರಲ್ಲಿ ಕಿರಿಕಿರಿ ತಂದಿತ್ತು. ಈ ವಿಚಾರವೂ ಕೂಡಾ ಮತದಾರರನ್ನು ಕಾಂಗ್ರೆಸ್​​ಗೆ ಮತಹಾಕಿಸಲು ವಿಫಲವಾಗಿದೆ. ಬಿಜೆಪಿ ಆಡಳಿತದಲ್ಲಿ ತ್ರಿವೇಂದ್ರ ಸಿಂಗ್ ರಾವತ್, ತಿರಥ್ ಸಿಂಗ್ ರಾವತ್ ಮತ್ತು ಪುಷ್ಕರ್ ಸಿಂಗ್ ಧಾಮಿ ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇದು ಮತದಾರರ ಮೇಲೆ ಪರಿಣಾಮ ಬೀರಿಲ್ಲ ಎಂಬುದು ವಿಶೇಷ. ಕಾಂಗ್ರೆಸ್ ಈ ವಿಚಾರವನ್ನು ಮತಗಳನ್ನಾಗಿ ಪರಿವರ್ತನೆ ಮಾಡಿಕೊಂಡಿಲ್ಲ ಎಂಬುದೂ ಮೇಲ್ನೋಟಕ್ಕೆ ಗೊತ್ತಾಗುವಂತಿದೆ.

6. ಕೆಲಸ ಮಾಡಿದ ಮೋದಿ ವರ್ಚಸ್ಸು?: ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಉದ್ದೇಶದೊಂದಿಗೆ ಪ್ರಧಾನಿ ಮೋದಿ ಸೇರಿದಂತೆ ಹಲವು ಬಿಜೆಪಿ ನಾಯಕರು ತಮ್ಮ ಪ್ರಭಾವವನ್ನು ಉತ್ತರಾಖಂಡ ಚುನಾವಣೆ ಮೇಲೆ ತೋರಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಪಟ್ಟಿ ಮತ್ತು ಪ್ರಚಾರದವರೆಗೂ ಕೇಂದ್ರ ಸಚಿವರಾದ ನಿಶಾಂಕ್, ಗಡ್ಕರಿ ಮುಂತಾದವರು ಉತ್ತರಾಖಂಡದಲ್ಲಿ ಕೆಲಸ ಮಾಡಿದ್ದಾರೆ. ಇದರೊಂದಿಗೆ ಕೇಂದ್ರ ಸರ್ಕಾರದ ಯೋಜನೆಗಳೂ ಮತ್ತು ಮೋದಿ ವರ್ಚಸ್ಸೂ ಕೂಡಾ ಉತ್ತರಾಖಂಡದಲ್ಲಿ ಕೆಲಸ ಮಾಡಿದೆ ಎನ್ನಬಹುದು.

7. ಮುಂದಿನ ಸಿಎಂ ಯಾರು?:ಬಿಜೆಪಿ ಬಹುಮತದಲ್ಲಿ ಜಯಗಳಿಸಿದೆಯಾದರೂ, ಮುಖ್ಯಮಂತ್ರಿಯೇ ಸೋಲು ಅನುಭವಿಸಿದ ಕಾರಣದಿಂದ ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬ ಕುತೂಹಲ ಉತ್ತರಾಖಂಡ ರಾಜಕೀಯ ವಲಯದಲ್ಲಿ ಮೂಡಿದೆ. ಮಾಜಿ ಮುಖ್ಯಮಂತ್ರಿಗಳಾದ ತ್ರಿವೇಂದ್ರ ಸಿಂಗ್ ರಾವತ್ ಅಥವಾ ತಿರಥ್ ಸಿಂಗ್ ರಾವತ್ ಅವರನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಲಿದೆಯೇ? ಅಥವಾ ಹೊಸ ಸಿಎಂ ಅನ್ನು ನಿಯೋಜನೆ ಮಾಡಲಿದೆಯೇ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

Last Updated : Mar 10, 2022, 6:02 PM IST

ABOUT THE AUTHOR

...view details