ನವದೆಹಲಿ: 2024ರಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ. ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳು ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿವೆ. ಕರ್ನಾಟಕ ಚುನಾವಣೆ ಬಳಿಕ ಬಿಜೆಪಿ ಎಚ್ಚೆತ್ತುಕೊಂಡಿದೆ. ಈ ಸಂಬಂಧ ಅದು ಭಾರಿ ತಲೆ ಕೆಡಿಸಿಕೊಂಡಿದೆ. ಈಗಿನಿಂದಲೇ ಭರ್ಜರಿ ರಣತಂತ್ರ ಹೆಣೆಯುತ್ತಿದೆ.
ಭಾರತೀಯ ಜನತಾ ಪಕ್ಷವು ಜೂನ್ 11 ರಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಸಭೆಯನ್ನು ಕರೆದಿದೆ. ಪಕ್ಷದ ಮೂಲಗಳ ಪ್ರಕಾರ, "ಕೆಲ ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಮತ್ತು 2024 ರ ಲೋಕಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ಸಭೆ ಕರೆಯಲಾಗಿದೆ. ಕೇಂದ್ರ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ, ಬಿಎಲ್ ಸಂತೋಷ್ ಸೇರಿದಂತೆ ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಈ ವೇಳೆ ಭಾಗವಹಿಸಲಿದ್ದಾರೆ" ಎಂದು ತಿಳಿಸಿದೆ.
ಬುಧವಾರ ಜೆಪಿ ನಡ್ಡಾ ಅವರು ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ವಿಶೇಷ 'ಟಿಫಿನ್ ಸಭೆ' ನಡೆಸಿದರು. ಈ ವೇಳೆ ಪಕ್ಷದ ಕಾರ್ಯಕರ್ತರಿಗೆ ಜನರ ಹೃದಯ ಗೆಲ್ಲಲು ವಿಭಿನ್ನ ಮಾರ್ಗಗಳನ್ನು ಕಂಡುಕೊಳ್ಳುವಂತೆ ಸೂಚಿಸಿದರು. ಜೊತೆಗೆ, ಪಕ್ಷದ ಕಾರ್ಯಕರ್ತರು ಸ್ವಯಂ ಶಿಸ್ತು ಮತ್ತು ಪರಸ್ಪರ ಒಗ್ಗಟ್ಟಿನಿಂದ ಇರಬೇಕು. ಅಹಂಕಾರವನ್ನು ತೊರೆಯಲು ನಮಗೆಲ್ಲರಿಗೂ ಶಿಸ್ತಿನ ಅವಶ್ಯಕತೆಯಿದೆ, ಮೊದಲು ನಿಮ್ಮ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಿ, ಧೈರ್ಯ ಕಳೆದುಕೊಳ್ಳಬೇಡಿ, ನಂತರ ಮತದಾರರ ಹೃದಯ ಗೆಲ್ಲಲು ಸಾಧ್ಯ ಎಂದು ಪಕ್ಷದ ಹೊಸ ಮತ್ತು ಹಳೆಯ ಕಾರ್ಯಕರ್ತರಿಗೆ ತಿಳಿಸಿದರು.
ಇದನ್ನು ಓದಿ:ಪ್ರಜಾ ಪ್ರಣಾಳಿಕೆ ಸಮರ್ಥಿಸಿಕೊಂಡ ಜೆಪಿ ನಡ್ಡಾ : ಕೇಸರಿ ಪ್ರಣಾಳಿಕೆ ಬಗ್ಗೆ ನಾಯಕರು ಹೇಳಿದ್ದೇನು..?
70 ವರ್ಷಗಳಿಂದ ಅಭಿವೃದ್ಧಿ ಕಾಣದ ದೇಶ ಮೋದಿ ಬಂದ ನಂತರ ಬೆಳವಣಿಗೆ ಕಾಣ್ತಿದೆ : ಜೆಪಿ ನಡ್ಡಾ