ತಮಿಳುನಾಡು(ಚೆನ್ನೈ):ಕೆಲ ದಿನಗಳ ಹಿಂದೆ ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರ ಗುಂಡೇಟಿನಿಂದ ಹುತಾತ್ಮನಾದ ವೀರ ಯೋಧ ಲಕ್ಷ್ಮಣ್ ಅವರ ಪಾರ್ಥಿವ ಶರೀರ ಇಂದು ಮಧುರೈ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಈ ಸಮಯದಲ್ಲಿ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಸಲ್ಲಿಸಲು ಆಗಮಿಸಿದ್ದ ರಾಜ್ಯ ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಅವರ ಕಾರಿನ ಮೇಲೆ ಚಪ್ಪಲಿ ಎಸೆದಿರುವ ಘಟನೆ ನಡೆದಿದೆ.
ವೀರ ಯೋಧ ಲಕ್ಷ್ಮಣ್ ಅವರ ಪಾರ್ಥಿವ ಶರೀರ ಮಧುರೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಮಧುರೈ ಮೇಯರ್ ಸೇರಿದಂತೆ ಕೆಲ ಶಾಸಕರು ಉಪಸ್ಥಿತರಿದ್ದರು. ಈ ವೇಳೆ ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಕೂಡ ಆಗಮಿಸಿದ್ದಾರೆ. ಅಂತಿಮ ನಮನ ಸಲ್ಲಿಸಿ, ಏರ್ಪೋರ್ಟ್ನಿಂದ ಹೊರಹೋಗುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಅವರ ಕಾರು ತಡೆಯಲು ಯತ್ನಿಸಿದ್ದು, ಚಪ್ಪಲಿ ಎಸೆದಿದ್ದಾರೆ.