ಕರ್ನಾಟಕ

karnataka

ETV Bharat / bharat

ಬಿಹಾರ ಚುನಾವಣೆ ಗೆದ್ದ ಬೆನ್ನಲ್ಲೇ ನೂತನ ಉಸ್ತುವಾರಿಗಳ ತಂಡ ರಚಿಸಿದ ಕಮಲ ಪಡೆ - ನೂತನ ಉಸ್ತುವಾರಿಗಳ ತಂಡ ರಚಿಸಿದ ಬಿಜೆಪಿ ಹೈಕಮಾಂಡ್

ಕರ್ನಾಟಕದ ಉಸ್ತುವಾರಿಯಾಗಿ ಅರುಣ್​​ ಸಿಂಗ್ ಅವರನ್ನು ನೇಮಕ ಮಾಡಲಾಗಿದ್ದು, ಅವರ ಜತೆ ಸಹ ಉಸ್ತುವಾರಿಯಾಗಿ ಡಿ ಕೆ ಅರುಣಾ ಅವರನ್ನು ನೇಮಿಸಲಾಗಿದೆ. ಕರ್ನಾಟಕದ ಉಸ್ತುವಾರಿಯಾಗಿದ್ದ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರ್ ರಾವ್ ಅವರು ಈಗ ಮಧ್ಯಪ್ರದೇಶದ ಉಸ್ತುವಾರಿ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ..

ನೂತನ ಉಸ್ತುವಾರಿಗಳ ತಂಡ ರಚಿಸಿದ ಕಮಲ ಪಡೆ
ನೂತನ ಉಸ್ತುವಾರಿಗಳ ತಂಡ ರಚಿಸಿದ ಕಮಲ ಪಡೆ

By

Published : Nov 14, 2020, 7:57 AM IST

ನವದೆಹಲಿ : ಬಿಹಾರ ಹಾಗೂ ದೇಶದ ವಿವಿಧ ರಾಜ್ಯಗಳ ಉಪಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ ಬೆನ್ನಲ್ಲೇ ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಮುಂದಾಗಿರುವ ಬಿಜೆಪಿ ಹೈ ಕಮಾಂಡ್​ ರಾಜ್ಯಗಳ ಉಸ್ತುವಾರಿಗಳ ಹೊಸ ತಂಡವನ್ನು ಘೋಷಿಸಿದೆ. ಕರ್ನಾಟಕದ ಉಸ್ತುವಾರಿಯಾಗಿ ಅರುಣ್​​ ಸಿಂಗ್ ಅವರನ್ನು ನೇಮಕ ಮಾಡಲಾಗಿದ್ದು, ಅವರ ಜತೆ ಸಹ ಉಸ್ತುವಾರಿಯಾಗಿ ಡಿ ಕೆ ಅರುಣಾ ಅವರನ್ನು ನೇಮಿಸಲಾಗಿದೆ.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರ ಹೆಗಲಿಗೆ ಮಹಾರಾಷ್ಟ್ರ, ಗೋವಾ, ತಮಿಳುನಾಡು ಮೂರು ರಾಜ್ಯಗಳ ಉಸ್ತುವಾರಿಯನ್ನು ಹೊರೆಸಲಾಗಿದೆ. ಕೇರಳದ ಉಸ್ತುವಾರಿಯಾಗಿ ಸಿ ಪಿ ರಾಧಾಕೃಷ್ಣನ್​ ನೇಮಕಗೊಂಡಿದ್ದು, ಕಾರ್ಕಳದ ಶಾಸಕ ಸುನೀಲ್​ ಕುಮಾರ್ ಅವರನ್ನು ಕೇರಳದ ಸಹ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಉತ್ತರ ಪ್ರದೇಶದ ಉಸ್ತುವಾರಿಯಾಗಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಾಧಾ ಮೋಹನ್​ ಸಿಂಗ್​ಗೆ ನೀಡಲಾಗಿದೆ. ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸತ್ಯಕುಮಾರ್, ಸುನಿಲ್ ಓಜಾ ಮತ್ತು ಸಂಜೀವ್ ಚೌರಾಸಿಯಾ ಅವರು ಸಿಂಗ್ ಅವರಿಗೆ ಉತ್ತರಪ್ರದೇಶದಲ್ಲಿ ಸಾಥ್​ ನೀಡಲಿದ್ದಾರೆ.

ಈ ಹಿಂದೆ ದೆಹಲಿಯ ಸಹ-ಉಸ್ತುವಾರಿ ವಹಿಸಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ತರುಣ್​ ಚುಗ್​ ಅವರಿಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್​​, ತೆಲಂಗಾಣ ಜವಾಬ್ದಾರಿ ನೀಡಿದ್ದು, ಭುಪೇಂದ್ರ ಯಾದವ್​ಗೆ ಬಿಹಾರ ಮತ್ತು ಗುಜರಾತ್​ ಹೊಣೆ ಹೊರೆಸಿದ್ದಾರೆ.

ಕೈಲಾಶ್ ವಿಜಯವರ್ಗಿಯಾ ಪಶ್ಚಿಮ ಬಂಗಾಳದ ಉಸ್ತುವಾರಿ ವಹಿಸಲಿದ್ದು, ಅವರಿಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರವಿಂದ್ ಮೆನನ್ ಮತ್ತು ಪಕ್ಷದ ರಾಷ್ಟ್ರೀಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳ್ವಿಯಾ ಸಾಥ್​ ನೀಡಲಿದ್ದಾರೆ.

ಕರ್ನಾಟಕದ ಉಸ್ತುವಾರಿಯಾಗಿದ್ದ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರ್ ರಾವ್ ಅವರು ಈಗ ಮಧ್ಯಪ್ರದೇಶದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಪಕ್ಷದ ವಕ್ತಾರರಾಗಿರುವ ಸಂಬಿತ್​ ಪಾತ್ರಾ ಅವರಿಗೆ ಮಣಿಪುರದ ಹೊಣೆಗಾರಿಕೆ ನೀಡಲಾಗಿದೆ. ಹೊಸದಾಗಿ ನೇಮಕಗೊಂಡ ಪ್ರಧಾನ ಕಾರ್ಯದರ್ಶಿ ಡಿ.ಪುರಂದೇಶ್ವರಿ ಈಗ ಒಡಿಶಾದಲ್ಲಿ ಪಕ್ಷದ ಕಾರ್ಯಗಳನ್ನು ನೋಡಿಕೊಳ್ಳಲಿದ್ದಾರೆ ಮತ್ತು ಛತ್ತೀಸ್‌ಗಢದ ಉಸ್ತುವಾರಿ ವಹಿಸಲಿದ್ದಾರೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಗೌತಮ್ ಅವರಿಗೆ ಪಂಜಾಬ್, ಚಂಡೀಗಢ ಮತ್ತು ಉತ್ತರಾಖಂಡದ ಉಸ್ತುವಾರಿ ವಹಿಸಲಾಗಿದೆ. ಜಾರ್ಖಂಡ್ ಮತ್ತು ಅರುಣಾಚಲ ಪ್ರದೇಶದ ಉಸ್ತುವಾರಿಯಾಗಿ ದಿಲೀಪ್ ಸಕಿಯಾ ಅವರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕೇಂದ್ರ ಸಚಿವ ವಿ.ಮುರಳೀಧರನ್ ಅವರನ್ನು ಆಂಧ್ರಪ್ರದೇಶದ ಉಸ್ತುವಾರಿ ಮತ್ತು ಸುನಿಲ್ ದಿಯೋಧರ್ ಅವರನ್ನು ಸಹ-ಉಸ್ತುವಾರಿಯಾಗಿ ನೇಮಕ ಮಾಡಿದೆ. ಉತ್ತರಪ್ರದೇಶದ ಸಹ-ಉಸ್ತುವಾರಿ ವಹಿಸಿರುವ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸತ್ಯಕುಮಾರ್ ಅವರನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಉಸ್ತುವಾರಿ ವಹಿಸಿದ್ದು, ಹರಿಯಾಣದ ಉಸ್ತುವಾರಿಯನ್ನು ರಾಷ್ಟ್ರೀಯ ಕಾರ್ಯದರ್ಶಿ ವಿನೋದ್ ತಾವ್ಡೆ ಅವರಿಗೆ ನೀಡಲಾಗಿದೆ.

ಅವಿನಾಶ್ ರೈ ಖನ್ನಾ ಹಿಮಾಚಲ ಪ್ರದೇಶದ ಉಸ್ತುವಾರಿ ಮತ್ತು ಸಹ ಉಸ್ತುವಾರಿಯಾಗಿ ಸಂಜಯ್ ಟಂಡನ್ ಅವರನ್ನು ನೇಮಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

For All Latest Updates

ABOUT THE AUTHOR

...view details