ನವದೆಹಲಿ:ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುವುದಾಗಿ ಬಿಜೆಪಿ ಶುಕ್ರವಾರ ಅಧಿಕೃತವಾಗಿ ಘೋಷಿಸಿದೆ.
ಅಮರಿಂದರ್ ಸಿಂಗ್ ಶುಕ್ರವಾರ ಬಿಜೆಪಿಯ ಪಂಜಾಬ್ ಉಸ್ತುವಾರಿ ಮತ್ತು ಕೇಂದ್ರ ಸಚಿವ ಗಜೇಂದ್ರ ಶೇಖಾವತ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು. ಸಭೆಯ ಬಳಿಕ ಉಭಯ ಪಕ್ಷಗಳ ಮೈತ್ರಿಯನ್ನು ಅಧಿಕೃತವಾಗಿ ಪ್ರಕಟಿಸಿದರು.
ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ಗಜೇಂದ್ರ ಶೇಖಾವತ್, ಪಂಜಾಬ್‌ನಲ್ಲಿ ಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಒಟ್ಟಿಗೆ ಸ್ಪರ್ಧಿಸಲಿವೆ ಮತ್ತು ನಾವು ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಈ ತಿಂಗಳ ಆರಂಭದಲ್ಲಿ ಚಂಡೀಗಢದಲ್ಲಿ ಭೇಟಿಯಾದ ನಂತರ ಉಭಯ ನಾಯಕರ ನಡುವಿನ ಎರಡನೇ ಸಭೆ ಇದಾಗಿದೆ. ಸಭೆಯ ನಂತರ ಅವರು ತಮ್ಮ ಪಕ್ಷಗಳ ನಡುವಿನ ಮೈತ್ರಿಯನ್ನು ಅಧಿಕೃತವಾಗಿ ಘೋಷಿಸಿದರು. ಸೀಟು ಹಂಚಿಕೆಯ ವಿವರಗಳನ್ನು ಸೂಕ್ತ ಸಮಯದಲ್ಲಿ ಪ್ರಕಟಿಸುವ ಬಗ್ಗೆಯೂ ಚರ್ಚಿಸಿದ್ದಾರೆ.
ಈ ಹಿಂದೆ ಬಿಜೆಪಿಯ ಹಳೆಯ ಮಿತ್ರಪಕ್ಷಗಳಲ್ಲಿ ಒಂದಾದ ಶಿರೋಮಣಿ ಅಕಾಲಿ ದಳವು ವಿವಾದಿತ ಕೃಷಿ ಕಾಯ್ದೆಯನ್ನು ಹಿಂಪಡೆಯದುದರಿಂದ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿತ್ತು. ಅಮರಿಂದರ್ ಸಿಂಗ್ ಅವರೊಂದಿಗಿನ ಈ ಮೈತ್ರಿಯು ಸಿಖ್ ಬಹುಸಂಖ್ಯಾತ ರಾಜ್ಯದಲ್ಲಿ ಬಿಜೆಪಿಗೆ ಮತ್ತೆ ಬಲ ಬಂದಂತಾಗಿದೆ.
ಇದನ್ನೂ ಓದಿ: BJP ಜೊತೆ ಮೈತ್ರಿಯೊಂದಿಗೆ ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧೆ.. ಗೆಲ್ಲುವುದೇ ನಮ್ಮ ಗುರಿ ಎಂದ ಅಮರೀಂದರ್