ಜೈಪುರ (ರಾಜಸ್ಥಾನ):ಇಲ್ಲಿನ ನೂತನ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಅವರು ಆಯ್ಕೆ ಆಗಿದ್ದಾರೆ. ಸಂಗನೇರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಭಜನ್ ಲಾಲ್ ಶರ್ಮಾ ಚುನಾಯಿತರಾಗಿದ್ದರು. ದಿಯಾ ಕುಮಾರಿ ಮತ್ತು ಪ್ರೇಮಚಂದ್ ಬೈರ್ವಾ ಉಪ ಮುಖ್ಯಮಂತ್ರಿಗಳಾಗಿದ್ದಾರೆ. ಅಜ್ಮೀರ್ ಉತ್ತರ ಶಾಸಕ ವಾಸುದೇವ್ ದೇವನಾನಿ ಅವರನ್ನು ವಿಧಾನಸಭೆ ಸ್ಪೀಕರ್ ಮಾಡಲಾಗಿದೆ.
ಪಂಚರಾಜ್ಯ ಚುನಾವಣೆಯಲ್ಲಿ ಮೂರರಲ್ಲಿ ಗೆಲುವು ಸಾಧಿಸಿದ ಭಾರತೀಯ ಜನತಾ ಪಾರ್ಟಿ ಎಲ್ಲ ಕಡೆ ಹೊಸ ಮುಖಕ್ಕೆ ಅವಕಾಶ ಮಾಡಿಕೊಟ್ಟಿದೆ. ಛತ್ತೀಸ್ಗಢದಲ್ಲಿ ವಿಷ್ಣುದೇವ್ ಮತ್ತು ಮಧ್ಯಪ್ರದೇಶದಲ್ಲಿ ಮೋಹನ್ ಯಾದವ್ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸಲಾಗಿತ್ತು. ರಾಜಸ್ಥಾನದಲ್ಲಿ ಸಿಎಂ ಸ್ಥಾನಕ್ಕೆ ಹೆಚ್ಚಿನ ಆಕಾಂಕ್ಷಿಗಳಿದ್ದರು. ಅವರೆಲ್ಲರನ್ನೂ ಹಿಂದಿಕ್ಕಿ ಭಜನ್ ಲಾಲ್ ಶರ್ಮಾ ಪಟ್ಟಕ್ಕೇರಲಿದ್ದಾರೆ.
ಭಜನ್ ಲಾಲ್ ಶರ್ಮಾ ಸಂಗನೇರ್ ಕ್ಷೇತ್ರದಿಂದ ಆಯ್ಕೆಯಾದರು. ಶರ್ಮಾ 1,45,162 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಪುಷ್ಪೇಂದ್ರ ಭಾರದ್ವಾಜ್ ಅವರ ವಿರುದ್ಧ 48,081 ಮತಗಳ ಅಂತರದಿಂದ ಗೆಲುವು ದಾಖಲಿಸಿದರು. ಪ್ರಸ್ತುತ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿರುವ ಶರ್ಮಾ ಅವರು ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಗ್ರೂಪ್ ಫೋಟೋ ತೆಗೆಸಿಕೊಂಡಿದ್ದು, ಶರ್ಮಾ ಕೊನೆಯ ಸಾಲಿನಲ್ಲಿ ನಿಂತಿದ್ದರು.