ನವದೆಹಲಿ :ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮಿತ್ರಪಕ್ಷಗಳಾದ ಅಪ್ನಾದಳ, ನಿಷಾದ್ ಹಾಗೂ ಬಿಜೆಪಿ ಒಟ್ಟಾಗಿ ಸ್ಪರ್ಧಿಸಲಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಘೋಷಿಸಿದ್ದಾರೆ.
ಚುನಾವಣೆಯಲ್ಲಿ ಮೈತ್ರಿ ಸಂಬಂಧ ದೆಹಲಿಯಲ್ಲಿಂದು ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಮೂರು ಪಕ್ಷಗಳು ಸೇರಿ ಯುಪಿಯ 403 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ವಿಸ್ತೃತ ಚರ್ಚೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಮೈತ್ರಿ ಕುರಿತು ಸಭೆ ನಡೆಸಿದ ಬಿಜೆಪಿ, ಅಪ್ನಾ ದಾಳ, ನಿಷಾದ್ ಪಕ್ಷಗಳ ನಾಯಕರು 2019ರ ಲೋಕಸಭೆ ಚುನಾವಣೆ ರೀತಿಯಲ್ಲಿಯೇ ಎನ್‌ಡಿಎ ಮೈತ್ರಿಕೂಟದ ಪಕ್ಷಗಳು ವಿಧಾನಸಭೆ ಚುನಾವಣೆ ಎದುರಿಸಲಿವೆ. ಎರಡೂ ಪಕ್ಷಗಳ ಜತೆ ಮಾತುಕತೆ ನಡೆಸಿ ಕೆಲವೇ ದಿನಗಳಲ್ಲಿ ಸೀಟು ಹಂಚಿಕೆ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಉತ್ತರಪ್ರದೇಶದಲ್ಲಿ ಕಳೆದ 5 ವರ್ಷಗಳಲ್ಲಿ ವಲಸೆ, ದೌರ್ಜನ್ಯ ಹಾಗೂ ಅಪಹರಣ ಪ್ರಕರಣ ಕಡಿಮೆಯಾಗಿವೆ. ಮೋದಿ ಮತ್ತು ಯೋಗಿ ನಾಯಕತ್ವದಲ್ಲಿ ರಾಜ್ಯದಲ್ಲಿ ಕಾನೂನು ಜೀವಂತವಾಗಿದೆ ಎಂದು ಹಿಂದಿನ ಆಡಳಿತ ಪಕ್ಷ ಎಸ್ಪಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.
40 ಸೀಟಿಗೆ ಅಪ್ನಾ ದಳ ಬೇಡಿಕೆ!
ಅಪ್ನಾ ದಳ ಪಕ್ಷದ ನಾಯಕಿ ಅನುಪ್ರಿಯಾ ಪಟೇಲ್, ನಿಷಾದ್ ಪಕ್ಷದ ನಾಯಕ ಸಂಜಯ್ ನಿಷಾದ್ ಅವರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಹಾಡಿ ಹೊಗಳಿದ್ದು, ಉತ್ತರಪ್ರದೇಶದಲ್ಲಿ ಮತ್ತೊಮ್ಮೆ ಎನ್‌ಡಿಎ ಅಧಿಕಾರ ಹಿಡಿಯಲಿದೆ ಎಂದು ಹೇಳಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಅಂತಿಮವಾಗಿದೆ. ನಾವು ಇಷ್ಟೇ ಸೀಟು ಬೇಕು ಎಂಬ ಪ್ರಸ್ತಾಪ ಮಾಡಿಲ್ಲ. ಮೈತ್ರಿಯ ಮಾತುಕತೆಯಷ್ಟೇ ಮುಗಿದಿದೆ ಎಂದು ಅನುಪ್ರಿಯಾ ಪಟೇಲ್ ಹೇಳಿದ್ದಾರೆ. ಅಪ್ನಾ ದಳ 40 ಸೀಟಿಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ.
ಕಳೆದ ವಾರ ಬಿಜೆಪಿ ಮೊದಲ ಮತ್ತು ಎರಡನೇ ಹಂತದ ಮತದಾನಕ್ಕೆ 107 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖ್‌ಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಸೀರತ್ ಕ್ಷೇತ್ರದಲ್ಲಿ ಕಣದಲ್ಲಿದ್ದಾರೆ.
ಯುಪಿ ವಿಧಾನಸಭೆಯ ಒಟ್ಟು 403 ಸ್ಥಾನಗಳಿಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 10, 14, 20, 23, 27 ಮಾರ್ಚ್ 3, 7ರಂದು ಮತದಾನ ನಡೆಯಲಿದೆ. ಮಾರ್ಚ್ 10 ರಂದು ಫಲಿತಾಂಶ ಹೊರ ಬೀಳಲಿದೆ.
ಇದನ್ನೂ ಓದಿ:ಬಿಪಿನ್ ರಾವತ್ ಸಹೋದರ ನಿವೃತ್ತ ಕರ್ನಲ್ ವಿಜಯ್ ರಾವತ್ ಬಿಜೆಪಿ ಸೇರ್ಪಡೆ