ಕತಿಹಾರ್ (ಬಿಹಾರ): ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ವಿಚಿತ್ರ ಮಗುವಿನ ಜನನವಾಗಿದೆ. ಇಲ್ಲಿನ ಕತಿಹಾರ್‌ನ ಸದರ್ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೋರ್ವಳು ನಾಲ್ಕು ಕೈ ಮತ್ತು ನಾಲ್ಕು ಕಾಲುಗಳಿರುವ ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ಮಗುವನ್ನು ನೋಡಲು ಆಸ್ಪತ್ರೆಗೆ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಕತಿಹಾರ್‌ನ ಮುಫಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹಫ್ಲಗಂಜ್ ಗ್ರಾಮದ ನಿವಾಸಿ ರಾಜು ಸಾಹ್ ಅವರ ಪತ್ನಿ ನಿನ್ನೆ ಈ ಶಿಶುವಿಗೆ ಜನ್ಮ ನೀಡಿದ್ದಾರೆ.
ಇದನ್ನೂ ಓದಿ:ಮಳೆಗೆ ಕೊಚ್ಚಿ ಹೋದ ಸೇತುವೆಯನ್ನು ಶಾಲೆಗೆ ಹೋಗಲೆಂದು ತಾವೇ ನಿರ್ಮಿಸಿಕೊಂಡ ಚಿಣ್ಣರು!
ಮಗು ಹುಟ್ಟಿರುವ ಸುದ್ದಿ ಹೊರಬರುತ್ತಿದ್ದಂತೆ ಎರಡೂ ಕುಟುಂಬದ ಸದಸ್ಯರಲ್ಲಿ ಸಂತಸ ಮನೆ ಮಾಡಿತ್ತು. ಆದರೆ, ನವಜಾತ ಶಿಶುವಿಗೆ ನಾಲ್ಕು ಕೈ ಮತ್ತು ನಾಲ್ಕು ಕಾಲುಗಳಿವೆ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ.
ವೈದ್ಯರ ವಿರುದ್ಧ ಕುಟುಂಬಸ್ಥರ ಆರೋಪ
ಹೆರಿಗೆ ಮಾಡಿಸಿಕೊಳ್ಳುವುದಕ್ಕೂ ಮುಂಚಿತವಾಗಿ ಅನೇಕ ಸಲ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿಸಲಾಗಿದೆ. ಈ ವೇಳೆ ವೈದ್ಯರು ಯಾವುದೇ ರೀತಿಯ ಮಾಹಿತಿ ತಿಳಿಸಿಲ್ಲ. ಪ್ರತಿ ಸಲ ಕೂಡ ಮಗು ಆರೋಗ್ಯವಾಗಿದೆ ಎಂದೇ ಹೇಳುತ್ತಿದ್ದರು. ಆದರೆ, ಇದೀಗ ಮಗು ವಿಚಿತ್ರವಾಗಿ ಜನಿಸಿದೆ ಎಂದು ದೂರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯರು, 'ಮಗು ದೈಹಿಕವಾಗಿ ವಿಕಲಾಂಗವಾಗಿದೆ. ಮಹಿಳೆಯ ಗರ್ಭದಲ್ಲಿ ಅವಳಿ ಮಕ್ಕಳಿದ್ದು, ಅವುಗಳು ಸರಿಯಾಗಿ ಬೆಳವಣಿಗೆ ಆಗದ ಕಾರಣ ಈ ರೀತಿಯಾಗಿ ಜನಿಸಿದೆ. ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ' ಎಂದರು.