ನವದೆಹಲಿ: ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಗಳ ಪೈಕಿ ನಾಲ್ಕರಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಈಗ ಅಧಿಕಾರ ರಚಿಸುವ ಕಸರತ್ತು ನಡೆಸುತ್ತಲೇ ಇದೆ.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅವರಿಗೆ ಮುಖ್ಯಮಂತ್ರಿ ಪಟ್ಟ ಖಾತ್ರಿಯಾಗಿದ್ದರೆ, ಮಣಿಪುರ ಮುಖ್ಯಮಂತ್ರಿಯಾಗಿ ಕೆ.ಬಿರೇನ್ ಸಿಂಗ್ ಸಿಎಂ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಆದರೆ, ಗೋವಾ ಮತ್ತು ಉತ್ತರಾಖಂಡ್ನಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆಗೆ ಕೇಸರಿ ಪಡೆ ಸಭೆಗಳ ಮೇಲೆ ಸಭೆ ನಡೆಸುತ್ತಲೇ ಇದ್ದು, ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಹೆಸರುಗಳು ಕೆಲ ಹೊತ್ತಿನಲ್ಲೇ ಹೊರ ಬೀಳುವ ಸಾಧ್ಯತೆ ಇದೆ.
ಉತ್ತರಾಖಂಡ್‌ಗೆ ಹೊಸ ಮುಖದ ಹುಡುಕಾಟ?: ಉತ್ತರಾಖಂಡ್ ಹಾಗೂ ಗೋವಾದಲ್ಲಿ ಮುಖ್ಯಮಂತ್ರಿ ಆಯ್ಕೆ ವಿಚಾರ ಬಿಜೆಪಿಗೆ ಒಂದು ರೀತಿಯಲ್ಲಿ ಕಗ್ಗಂಟಾಗಿದೆ. ಯಾಕೆಂದರೆ, ಉತ್ತರಾಖಂಡ್ನಲ್ಲಿ ಸ್ವತಃ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಹೀಗಾಗಿಯೇ ಹೊಸ ಮುಖದ ಹುಡುಕಾಟದಲ್ಲಿ ಬಿಜೆಪಿ ಹೈಕಮಾಂಡ್ ಮಗ್ನವಾಗಿದೆ. ಇದೇ ವೇಳೆ ಐದಾರು ಜನರ ಹೆಸರುಗಳು ಮುಖ್ಯಮಂತ್ರಿ ಗಾದಿಗೆ ಕೇಳಿ ಬರುತ್ತಿವೆ. ಇದರಲ್ಲಿ ಪ್ರಮುಖವಾಗಿ ಶಾಸಕರಾದ ಸತ್ಪಾಲ್ ಮಹಾರಾಜ್, ಧನ್ಸಿಂಗ್ ರಾವತ್, ಕೇಂದ್ರದ ಮಾಜಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮತ್ತು ಕೇಂದ್ರ ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್ ಭಟ್ ಅವರ ಹೆಸರುಗಳು ಸಿಎಂ ರೇಸ್ನಲ್ಲಿವೆ.