ಆಲಪ್ಪುಳ(ಕೇರಳ):ಕೇರಳದ ಕೆಲ ಪ್ರದೇಶಗಳಲ್ಲಿ ಹಕ್ಕಿ ಜ್ವರ ಇರುವುದು ದೃಢಪಟ್ಟಿದೆ. ಜ್ವರ ಪೀಡಿತ ಪ್ರದೇಶಗಳಲ್ಲಿ ಪಕ್ಷಿಗಳನ್ನು ಕೊಲ್ಲಲು ಆದೇಶಿಸಲಾಗಿದೆ.
ಸತ್ತ ಪಕ್ಷಿಗಳ ಮಾದರಿಗಳನ್ನು ಸಂಗ್ರಹಿಸಿ ಭೋಪಾಲ್ ಲ್ಯಾಬ್‌ನಲ್ಲಿ ಪರೀಕ್ಷಿಸಿದಾಗ H5N1 ವೈರಸ್ ಇರುವುದು ದೃಢಪಟ್ಟಿದೆ. ಆಲಪ್ಪುಳದಲ್ಲಿ ಬಾತುಕೋಳಿಗಳಲ್ಲಿ ಬರ್ಡ್ ಫ್ಲೂ ಇರುವುದು ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ಪಕ್ಷಿಗಳನ್ನು ಕೊಲ್ಲಲು ವಿಶೇಷ ಆರೋಗ್ಯ ಮತ್ತು ಪಶುಸಂಗೋಪನಾ ತಂಡಗಳನ್ನು ರಚಿಸಲಾಗಿದೆ. ಪಕ್ಷಿಗಳನ್ನು ಕೊಂದು ನಂತರ ಸುಟ್ಟು ಹಾಕಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೆಡುಮುಡಿ ಪ್ರದೇಶವೊಂದರಲ್ಲೇ ಈಗಾಗಲೇ 8,000ಕ್ಕೂ ಹೆಚ್ಚು ಬಾತುಕೋಳಿಗಳು ಸಾವನ್ನಪ್ಪಿವೆ. ಇದೀಗ ತಕಳಿ ಸೇರಿದಂತೆ ಇತರೆ ಭಾಗಗಳಲ್ಲೂ ಪ್ರಕರಣಗಳು ವರದಿಯಾಗುತ್ತಿವೆ. ಹಾಗಾಗಿ, ಆಲಪ್ಪುಳದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪಕ್ಷಿಗಳ ವಿನಿಮಯ ಮತ್ತು ಮಾರಾಟವನ್ನು ಅಧಿಕಾರಿಗಳು ನಿಷೇಧಿಸಿದ್ದಾರೆ.
ಇದನ್ನೂ ಓದಿ:ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾಗಿಂತ ಮುಂದೆ ಓಡಲು ಹೋಗಿ ಮುಗ್ಗರಿಸಿ ಬಿದ್ದ ಮುಖಂಡ.. ವಿಡಿಯೋ ವೈರಲ್
ಹಕ್ಕಿಜ್ವರ ಮನುಷ್ಯರಿಗೆ ಹರಡುವ ಸಾಧ್ಯತೆ ಬಹಳ ವಿರಳ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಆದ್ರೆ, ಇದು ಗಾಳಿಯ ಮೂಲಕ ಇತರೆ ಪಕ್ಷಿಗಳಿಗೆ ಹರಡಬಹುದು.
ಹಾಗಾಗಿ, ಹರಡುವಿಕೆಯನ್ನು ನಿಯಂತ್ರಿಸಲು ಅವುಗಳನ್ನು ಕೊಲ್ಲುವುದೇ ಏಕೈಕ ಮಾರ್ಗ ಎಂದು ತಿಳಿಸಿದ್ದಾರೆ. ಈ ಪ್ರದೇಶಗಳಲ್ಲಿ ನಿಗಾವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ.