ನವದೆಹಲಿ: ದೇಶದ ಕರಾವಳಿ ಪ್ರದೇಶಗಳಲ್ಲಿ ಮತ್ತೊಂದು ಚಂಡಮಾರುತದ ಅಪಾಯವಿದೆ. ಗುಜರಾತ್‌ನ ದಕ್ಷಿಣ ಪೋರಬಂದರ್‌ನಲ್ಲಿ ಆಗ್ನೇಯ ಅರಬ್ಬಿ ಸಮುದ್ರದ ಮೇಲಿನ ಕಡಿಮೆ ಒತ್ತಡದ ಪ್ರದೇಶವು ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಇದು ಸೈಕ್ಲೋನಿಕ್ ಚಂಡಮಾರುತವಾಗಿ ಬದಲಾಗುವ ಸಾಧ್ಯತೆ ಇದೆ. ಈ ಚಂಡಮಾರುತವನ್ನು 'ಬೈಪರ್‌ಜಾಯ್' ಎಂದು ಕರೆಯಲಾಗುವುದು. ಈ ಹೆಸರನ್ನು ಬಾಂಗ್ಲಾದೇಶ ನೀಡಿದೆ.
ಇಂದು ಬೆಳಗ್ಗೆ 8.30ಕ್ಕೆ ನೈಋತ್ಯ ಗೋವಾದಿಂದ 950 ಕಿ.ಮೀ, ನೈಋತ್ಯ ಮುಂಬೈನಿಂದ 1,100 ಕಿ.ಮೀ, ದಕ್ಷಿಣ ಪೋರಬಂದರ್‌ನಿಂದ 1,190 ಕಿ.ಮೀ ಹಾಗೂ ಪಾಕಿಸ್ತಾನದ ದಕ್ಷಿಣ ಕರಾಚಿಯಿಂದ 1,490 ಕಿ.ಮೀ ದೂರದಲ್ಲಿ ಕಡಿಮೆ ಒತ್ತಡ ಉಂಟಾಗಿದೆ ಎಂದು ಹವಾಮಾನ ಇಲಾಖೆ ಬುಲೆಟಿನ್‌ನಲ್ಲಿ ತಿಳಿಸಿದೆ. ಮುಂದಿನ 24 ಗಂಟೆಗಳಲ್ಲಿ ವಾಯುಭಾರ ಕುಸಿತವು ಉತ್ತರಾಭಿಮುಖವಾಗಿ ಚಲಿಸುವ ಸಾಧ್ಯತೆ ಇದೆ. ಇದು ಪೂರ್ವ - ಮಧ್ಯ ಅರೇಬಿಯನ್ ಸಮುದ್ರ ಮತ್ತು ಆಗ್ನೇಯ ಅರೇಬಿಯನ್ ಸಮುದ್ರದಲ್ಲಿ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಯಿದೆ.
ಅರಬ್ಬಿ ಸಮುದ್ರದಲ್ಲಿ ರೂಪುಗೊಂಡಿರುವ 'ಬೈಪರ್‌ಜಾಯ್' ಚಂಡಮಾರುತವು ದೇಶದ ಕರಾವಳಿ ಮತ್ತು ಇತರ ಪ್ರದೇಶಗಳಿಗೆ ಅಪಾಯವನ್ನುಂಟು ಮಾಡಲಿದೆ. ಮುಂದಿನ 24 ಗಂಟೆಗಳಲ್ಲಿ ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ ಇದೆ. ಈ ಚಂಡಮಾರುತವು ಕರಾವಳಿಯಿಂದ 1000 ರಿಂದ 1100 ಕಿಮೀ ದೂರದಲ್ಲಿದೆ. ಆದ್ದರಿಂದ ನಮ್ಮ ಕರಾವಳಿಯಲ್ಲಿ ಇದರ ಪ್ರಭಾವವು ಕಡಿಮೆ ಇರುತ್ತದೆ. ಗಾಳಿಯ ವೇಗ ಹೆಚ್ಚಾಗಿರುವುದರಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಮನವಿ ಮಾಡಿದೆ.
ಸೈಕ್ಲೋನ್ ತೀವ್ರತೆ: ಗುರುವಾರ (ಜೂನ್ 8) ಬೆಳಗಿನ ವೇಳೆಗೆ ಬೈಪರ್‌ಜಾಯ್ ಚಂಡಮಾರುತವು ತೀವ್ರವಾಗಿ ಬದಲಾಗಲಿದ್ದು, ಶುಕ್ರವಾರ (ಜೂನ್ 9) ಸಂಜೆ ವೇಳೆಗೆ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರ ನೇರ ಪರಿಣಾಮ ಕೇರಳ-ಕರ್ನಾಟಕ ಮತ್ತು ಲಕ್ಷದ್ವೀಪ - ಮಾಲ್ಡೀವ್ಸ್ ಸೇರಿದಂತೆ ನಾಲ್ಕು ರಾಜ್ಯದ ಕರಾವಳಿಯಲ್ಲಿ ಕಂಡು ಬರಲಿದೆ. ಇದರೊಂದಿಗೆ ಕೊಂಕಣ - ಗೋವಾ -ಮಹಾರಾಷ್ಟ್ರ ಕರಾವಳಿ ತೀರದಲ್ಲಿ ಜೂನ್ 8ರಿಂದ 10ರವರೆಗೆ ಸಮುದ್ರದಲ್ಲಿ ಅತಿ ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ. ಅಪಾಯದ ಹಿನ್ನೆಲೆಯಲ್ಲಿ ಸಮುದ್ರಕ್ಕೆ ತೆರಳಿರುವ ಮೀನುಗಾರರು ಕರಾವಳಿಗೆ ಮರಳುವಂತೆ ಸೂಚಿಸಲಾಗಿದೆ.