ನವದೆಹಲಿ:ಹೈದರಾಬಾದ್ ಮೂಲದ ಫಾರ್ಮಾಸ್ಯುಟಿಕಲ್ ಕಂಪನಿ ಬಯೋಲಾಜಿಕಲ್ ಇ ಲಿಮಿಟೆಡ್ (Biological E Limited) ಕಂಪನಿಯು ತಾನು ತಯಾರಿಸಿದ ಕಾರ್ಬೆವಾಕ್ಸ್ ಕೋವಿಡ್ ಲಸಿಕೆಯನ್ನು 5ರಿಂದ 12 ವರ್ಷದ ಒಳಗಿನ ಮಕ್ಕಳಿಗೆ ತುರ್ತು ಬಳಕೆಗೆ ಅವಕಾಶ ನೀಡಬೇಕೆಂದು ತಜ್ಞರ ಸಮಿತಿಗೆ ಮನವಿ ಮಾಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ತಜ್ಞರ ಸಮಿತಿಯು ಬಯೋಲಾಜಿಕಲ್ ಇ ಕಂಪನಿಯ ಕೋವಿಡ್ ಲಸಿಕೆಯನ್ನು ಕೆಲವು ಷರತ್ತುಗಳ ಅಡಿ 12ರಿಂದ 18 ವರ್ಷ ವಯಸ್ಸಿನವರಿಗೆ ತುರ್ತು ಬಳಕೆಗೆ ಅವಕಾಶ ನೀಡಲು ಶಿಫಾರಸು ಮಾಡಿತ್ತು. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಶೀಘ್ರದಲ್ಲೇ ಅನುಮತಿ ನೀಡುವ ನಿರೀಕ್ಷೆಯಿದೆ.
ಕಾರ್ಬೆವಾಕ್ಸ್ ಲಸಿಕೆಯ ಬೆಲೆಯು ತೆರಿಗೆಗಳನ್ನು ಹೊರತುಪಡಿಸಿ 145 ರೂಪಾಯಿ ಆಗಿರಲಿದ್ದು, ಒಂದು ಡೋಸ್ ಮತ್ತು ಎರಡನೇ ಡೋಸ್ ಮಧ್ಯೆ ಕೆಲವು ದಿನಗಳ ಅಂತರ ಇರಲಿದೆ. ಈ ವ್ಯಾಕ್ಸಿನ್ನ ಸುರಕ್ಷತೆಯನ್ನು ಗಣನೆಗೆ ತೆಗೆದುಕೊಂಡೇ ತುರ್ತು ಬಳಕೆಗೆ ಅವಕಾಶ ನೀಡಲಾಗಿದೆ ಎಂದು ತಜ್ಞತ ಸಮಿತಿ ಮೂಲಗಳು ಎಎನ್ಐಗೆ ಮಾಹಿತಿ ನೀಡಿವೆ.
ಕೇಂದ್ರ ಸರ್ಕಾರವು ಈಗಾಗಲೇ ಸುಮಾರು 5 ಕೋಟಿ ಕಾರ್ಬೆವಾಕ್ಸ್ ಲಸಿಕೆಯನ್ನು ಖರೀದಿಸಿದ್ದು, ರಾಜ್ಯಗಳಿಗೆ ವಿತರಣೆ ಮಾಡಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಈ ಲಸಿಕೆಯನ್ನು ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಒಳಪಡಿಸಲಾಗಿತ್ತು ಎಂದು ತಿಳಿದು ಬಂದಿದೆ.
ಇದನ್ನೂ ಓದಿ:80,039 ಸರ್ಕಾರಿ ಹುದ್ದೆಗಳಿಗೆ ಅಧಿವೇಶನದಲ್ಲೇ ಅಧಿಸೂಚನೆ ಹೊರಡಿಸಿದ ಸಿಎಂ ಕೆಸಿಆರ್