ನವದೆಹಲಿ: ಕೋವಿಡ್ ವಿರುದ್ಧ 5 ರಿಂದ 12 ವರ್ಷದ ಮಕ್ಕಳಿಗೆ ನೀಡಲಾಗುತ್ತಿರುವ ಕಾರ್ಬೆವಾಕ್ಸ್ ಲಸಿಕೆ ದರವನ್ನು 840 ರಿಂದ 250ಕ್ಕೆ ಇಳಿಸಲಾಗಿದ್ದು, ಖಾಸಗಿ ಕೇಂದ್ರಗಳಿಗೆ ಹೊಸ ದರದಲ್ಲಿ ಪೂರೈಕೆ ಮಾಡಲಾಗುತ್ತದೆ ಎಂದು ಔಷಧ ತಯಾರಕ ಸಂಸ್ಥೆ ಬಯೊಲಾಜಿಕಲ್ ಇ. ಲಿಮಿಟೆಡ್ (ಬಿಇ) ಹೇಳಿದೆ. ಪೂರೈಕೆ ದರ ರೂ 250ಕ್ಕೆ ಇಳಿದರೂ, ಖಾಸಗಿ ಕೇಂದ್ರಗಳಲ್ಲಿ ಒಂದು ಡೋಸ್ ಲಸಿಕೆ 400 ರೂ.ಗೆ ಲಭ್ಯವಾಗಲಿದೆ. ಇದರಲ್ಲಿ ಜಿಎಸ್ಟಿ ಮತ್ತು ಇನ್ನಿತರೆ ಶುಲ್ಕಗಳು ಸೇರಲಿವೆ ಎಂದು ಕಂಪನಿ ತಿಳಿಸಿದೆ.
ಈ ಹಿಂದೆ ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಲಸಿಕೆಯು ತೆರಿಗೆ, ಶುಲ್ಕ ಸೇರಿ ರೂ. 990ಕ್ಕೆ ಸಿಗುತ್ತಿತ್ತು. ಈ ವರ್ಷ ಮಾರ್ಚ್‌ನಲ್ಲಿ ಕೋವಿಡ್ ವಿರುದ್ಧ ಮಕ್ಕಳಿಗೆ ಲಸಿಕೆ ಹಾಕುವ ಪ್ರಕ್ರಿಯೆ ಪ್ರಾರಂಭವಾದಾಗ ಕಾರ್ಬೆವಾಕ್ಸ್ ಲಸಿಕೆ ಬಳಸಲಾಯಿತು. ಸರ್ಕಾರದ ಲಸಿಕೆ ಕಾರ್ಯಕ್ರಮಕ್ಕಾಗಿ ಬೆಲೆಯನ್ನು ರೂ. 145ಕ್ಕೆ ನಿಗದಿ ಮಾಡಲಾಗಿತ್ತು. ತನ್ನ ಲಸಿಕೆಯನ್ನು ಹೆಚ್ಚು ಕೈಗೆಟುಕುವ ಉದ್ದೇಶದಿಂದ ಮತ್ತು ವೈರಸ್ ವಿರುದ್ಧ ಗರಿಷ್ಠ ಸಂಖ್ಯೆಯ ಮಕ್ಕಳನ್ನು ರಕ್ಷಿಸಲು ಸಹಾಯ ಮಾಡುವ ಸಲುವಾಗಿ ಬೆಲೆ ಕಡಿಮೆ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ:ಆರೋಗ್ಯ ಇಲಾಖೆ ಎಡವಟ್ಟು.. ಯಾದಗಿರಿಯಲ್ಲಿ ಮೃತನ ಮೊಬೈಲ್ಗೆ ಬಂತು ಕೋವಿಡ್ ಲಸಿಕೆ ಸಕ್ಸಸ್ಫುಲ್ ಮೆಸೇಜ್!
5 ಮತ್ತು 12 ವರ್ಷ ವಯಸ್ಸಿನ ಮಕ್ಕಳಿಗೆ ತುರ್ತು ಬಳಕೆಯ ಅಧಿಕಾರವನ್ನು (EUA) ಸ್ವೀಕರಿಸಿದ ವಾರದೊಳಗೆ ಬಯೊಲಾಜಿಕಲ್ ಇ. ಲಿಮಿಟೆಡ್ ಈ ನಿರ್ಧಾರಕ್ಕೆ ಬಂದಿದೆ. ತುರ್ತು ಬಳಕೆ ಅಧಿಕಾರ ಸ್ವೀಕರಿಸುವ ಮೊದಲು, ಕಂಪನಿಯು 5-12 ಮತ್ತು 12-18 ವಯಸ್ಸಿನ 624 ಮಕ್ಕಳಲ್ಲಿ ಹಂತ 2 ಮತ್ತು 3 ಮಲ್ಟಿಸೆಂಟರ್ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಿದೆ. ಈ ವೇಳೆ ಮಕ್ಕಳಿಗೆ ಕಾರ್ಬೆವಾಕ್ಸ್ ಲಸಿಕೆಯ ಒಂದು ಡೋಸ್ ನೀಡಲಾಗುತ್ತಿತ್ತು. ಇದರಿಂದಾಗಿ ಲಸಿಕೆ ನೀಡಿಕೆಗೆ ಹೆಚ್ಚು ಅನುಕೂಲಕರ ಮತ್ತು ವ್ಯರ್ಥ ನಿವಾರಿಸುತ್ತದೆ ಎಂದು ಕಂಪನಿ ಹೇಳಿದೆ.
ಕೊವಿನ್ (Co-WIN) ಅಪ್ಲಿಕೇಶನ್ ಅಥವಾ 12 ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ Co-WIN ಪೋರ್ಟಲ್ ಮೂಲಕ ಕಾರ್ಬೆವಾಕ್ಸ್ಗಾಗಿ ಲಸಿಕೆ ಸ್ಲಾಟ್ ಬುಕ್ ಮಾಡಬಹುದು. ಈಗಾಗಲೇ ಬಯೊಲಾಜಿಕಲ್ ಇ. ಲಿಮಿಟೆಡ್ ಸರ್ಕಾರಕ್ಕೆ ಸುಮಾರು 100 ಮಿಲಿಯನ್ ಲಸಿಕೆ ಡೋಸ್‌ಗಳನ್ನು ಪೂರೈಸಿದೆ. ಟೆಕ್ಸಾಸ್ ಚಿಲ್ಡ್ರನ್ಸ್ ಹಾಸ್ಪಿಟಲ್ ಮತ್ತು ಬೇಲರ್ ಕಾಲೇಜ್ ಆಫ್ ಮೆಡಿಸಿನ್ ಸಹಯೋಗದೊಂದಿಗೆ ಕಂಪೆನಿ ಕಾರ್ಬೆವಾಕ್ಸ್ ಲಸಿಕೆ ಅಭಿವೃದ್ಧಿಪಡಿಸಿದೆ.