ನವದೆಹಲಿ:ಲಿಖೀಂಪುರ ಖೇರಿ ಪ್ರಕರಣ ಸಂಬಂಧ ವಿರೋಧ ಪಕ್ಷಗಳ ಗದ್ದಲದ ನಡುವೆಯೇ ಚುನಾವಣಾ ಸುಧಾರಣೆಗಳ 'ಚುನಾವಣಾ ಕಾನೂನುಗಳು (ತಿದ್ದುಪಡಿ) ಮಸೂದೆ, 2021' ಅನ್ನು ಲೋಕಸಭೆಯಲ್ಲಿಂದು ಅಂಗೀಕರಿಸಲಾಗಿದೆ.
ಕಾನೂನು ಸಚಿವ ಕಿರಣ್ ರಿಜಿಜು ಮಸೂದೆ ಮಂಡಿಸಿದರು. ಸಂಕ್ಷಿಪ್ತ ಚರ್ಚೆಯ ನಂತರ ಧ್ವನಿ ಮತದಿಂದ ಅಂಗೀಕರಿಸಲಾಯಿತು. ಈ ವೇಳೆ, ಕೆಲ ವಿರೋಧ ಪಕ್ಷದ ಸದಸ್ಯರು ಇದನ್ನು ಸಂಸದೀಯ ಸಮಿತಿಗೆ ಉಲ್ಲೇಖಿಸಬೇಕೆಂದು ಒತ್ತಾಯಿಸಿದರು.
ಆದರೆ, ಈ ಬೇಡಿಕೆಯನ್ನು ಸಚಿವ ಕಿರಣ್ ರಿಜಿಜು ತಿರಸ್ಕರಿಸಿದರು. ಮಸೂದೆಯ ಭಾಗವಾಗಿರುವ ವಿವಿಧ ಪ್ರಸ್ತಾವನೆಗಳನ್ನು ಈಗಾಗಲೇ ಕಾನೂನು ಮತ್ತು ಸಿಬ್ಬಂದಿಗಳ ಸ್ಥಾಯಿ ಸಮಿತಿಯು ಸೂಚಿಸಿರುವ ಜೊತೆಗೆ ಶಿಫಾರಸು ಮಾಡಿದೆ ಎಂದು ಹೇಳಿದರು.
ಬಳಿಕ ವಿಪಕ್ಷಗಳ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಲಾಯಿತು. ಇದಕ್ಕೂ ಮುನ್ನ ಅನುದಾನಕ್ಕೆ ಪೂರಕ ಬೇಡಿಕೆಗಳನ್ನು ಸದನ ಅಂಗೀಕರಿಸಿತು.