ಅಹಮದಾಬಾದ್:2002ರ ಗುಜರಾತ್ ಗಲಭೆಯಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕುಟುಂಬದ ಏಳು ಜನರನ್ನು ಬಲಿ ಪಡೆದಿದ್ದ 11 ಆರೋಪಿಗಳಿಗೆ ಕ್ಷಮಾದಾನ ನೀಡಿ ಜೈಲಿನಿಂದ ಮುಕ್ತಿ ನೀಡಿದ್ದಕ್ಕೆ ಸಂತ್ರಸ್ತೆ ಬಿಲ್ಕಿಸ್ ಬಾನೊ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ಜೈಲಿನಿಂದ ಹೊರಬಂದಿದ್ದು, ತನ್ನ ಜೀವನಕ್ಕೆ ಭದ್ರತೆ ಇದೆಯಾ ಎಂದು ಪ್ರಶ್ನಿಸಿದ್ದಾರೆ.
ಮೂರು ದಿನಗಳ ಹಿಂದೆ ಹಿಂದೆ ಅಂದರೆ ಆಗಸ್ಟ್ 15 ರಂದು ದೀರ್ಘಾವಧಿಯಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳಿಗೆ ಸಭ್ಯತೆ, ಸನ್ನಡತೆ ಆಧಾರದ ಮೇಲೆ ಕ್ಷಮಾದಾನ ನೀಡಲಾಗಿದೆ. ಇದರಲ್ಲಿ ಗುಜರಾತ್ ಗಲಭೆಯ ಸಂತ್ರಸ್ತೆ ಬಿಲ್ಕಿಸ್ ಬಾನೋ ಅವರ ಮೇಲೆ ಅತ್ಯಾಚಾರ ಮಾಡಿದವರೂ ಇದ್ದು ಜೈಲಿನಿಂದ ಬಿಡುಗಡೆ ಹೊಂದಿದ್ದಾರೆ.
ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಲ್ಕಿಸ್ ಬಾನೋ ಅವರು, 20 ವರ್ಷಗಳ ಹಿಂದೆ ನಡೆದ ಕ್ರೂರ ಘಟನೆ ನನ್ನನ್ನು ಇನ್ನೂ ಹಿಂಸಿಸುತ್ತಿದೆ. ಕುಟುಂಬ ಕಳೆದುಕೊಂಡ ಆಘಾತದಿಂದ ನಾನು ತತ್ತರಿಸಿದ್ದೇನೆ. ಆದರಿಂದ ನಾನು ನಿಶ್ಚೇಷ್ಟಿತಳಾಗಿದ್ದೇನೆ. ನನ್ನ ಮೇಲೆ ಕ್ರೌರ್ಯ ಮೆರೆದ ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿರುವುದು ಆಘಾತ ತಂದಿದೆ ಎಂದು ಹೇಳಿದರು.
ಯಾವುದೇ ಮಹಿಳೆಗೆ ನ್ಯಾಯವು ಈ ರೀತಿ ಕೊನೆಗೊಳ್ಳುವುದು ಸರಿಯಲ್ಲ. ನಮ್ಮ ನೆಲದ ಕಾನೂನುಗಳನ್ನು ನಂಬಿದ್ದೇನೆ. ನನಗಾದ ಆಘಾತವನ್ನು ಮರೆತು ನಿಧಾನವಾಗಿ ಬದುಕಲು ಕಲಿತಿದ್ದೇನೆ. ಇದೀಗ ಅಪರಾಧಿಗಳು ಬಿಡುಗಡೆ ಹೊಂದಿರುವುದು ನನ್ನಲ್ಲಿ ಮತ್ತೆ ಆತಂಕವನ್ನು ಉಂಟು ಮಾಡಿದೆ. ನನ್ನ ಶಾಂತಿ ಕದಡಿದೆ. ಕಾನೂನಿನ ಮೇಲಿನ ನನ್ನ ನಂಬಿಕೆಯನ್ನು ಅಲುಗಾಡಿಸಿದೆ ಎಂದು ಹೇಳಿದರು.