ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಾ ಶಾಲಾ ವಿದ್ಯಾರ್ಥಿನಿಗೆ ಗುದ್ದಿದ ಸವಾರ... ಸಿಸಿಟಿವಿ ವಿಡಿಯೋ ತಿರುವನಂತಪುರಂ (ಕೇರಳ): ರಸ್ತೆಯಲ್ಲಿ ಇತ್ತೀಚೆಗೆ ಬೈಕ್ ಸ್ಟಂಟ್ ಮತ್ತು ವ್ಹೀಲಿಂಗ್ ಮಾಡುವ ಯುವಕರ ಹಾವಳಿ ಹೆಚ್ಚಾಗಿದೆ. ಇದೇ ರೀತಿಯಾಗಿ ಯುವಕನೋರ್ವ ಬೈಕ್ ವ್ಹೀಲಿಂಗ್ ಮಾಡುತ್ತಿದ್ದಾಗ ಕೇರಳದಲ್ಲಿ ಅವಘಡವೊಂದು ಸಂಭವಿಸಿದೆ. ವ್ಲೀಲಿಂಗ್ ವೇಳೆ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶಾಲಾ ವಿದ್ಯಾರ್ಥಿನಿಗೆ ಸವಾರ ಡಿಕ್ಕಿ ಹೊಡೆದಿದ್ದಾನೆ.
ರಾಜಧಾನಿ ತಿರುವನಂತಪುರಂ ಜಿಲ್ಲೆಯ ಕಲ್ಲಂಬಳಂನಲ್ಲಿ ಫೆಬ್ರವರಿ 9ರಂದು ಈ ಘಟನೆ ನಡೆದಿದ್ದು, ರಸ್ತೆ ಬದಿಯ ಸಿಸಿಟಿವಿಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಾ ವಿದ್ಯಾರ್ಥಿನಿಗೆ ಗುದ್ದಿದ ದೃಶ್ಯಗಳು ಸೆರೆಯಾಗಿವೆ. ಆರೋಪಿ ಬೈಕ್ ಸವಾರನನ್ನು 18 ವರ್ಷದ ನೌಫಲ್ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ವಿದ್ಯಾರ್ಥಿನಿ ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ನೌಫಲ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.
19 ಸಾವಿರ ದಂಡ ಕಟ್ಟಿದ್ದರೂ ಕಲಿಯದ ಬುದ್ಧಿ: ಆರೋಪಿ ನೌಫಲ್ ವಿರುದ್ಧ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಈಗಾಗಲೇ ಏಳು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ. ಕೆಲ ದಿನಗಳ ಹಿಂದೆಯಷ್ಟೇ ನೌಫಲ್ 19,250 ರೂಪಾಯಿ ದಂಡ ಪಾವತಿಸಿ ತನ್ನ ಬೈಕ್ ಬಿಡುಗಡೆ ಮಾಡಿಸಿಕೊಂಡು ಬಂದಿದ್ದ. ಆದರೂ, ಬುದ್ಧಿ ಕಲಿಯದ ಆರೋಪಿ ಗುರುವಾರ ಸಹ ಈ ವ್ಹೀಲಿಂಗ್ ತೊಡಗಿದ್ದ ಎಂದು ಹೇಳಲಾಗಿದೆ.
ಕಲ್ಲಂಬಳಂನಲ್ಲಿ ರಸ್ತೆಯಲ್ಲಿ ವಿದ್ಯಾರ್ಥಿನಿಯರು ನಡೆದುಕೊಂಡು ಹೋಗುವಾಗ ಬೈಕ್ ಸ್ಟಂಟ್ ಮಾಡುವುದೇ ಕೆಲ ಯುವಕರ ಹವ್ಯಾಸವಾಗಿದೆ ಎನ್ನಲಾಗಿದೆ. ಸದ್ಯ ಆರೋಪಿ ನೌಫಲ್ನ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸಲು ಮೋಟಾರು ವಾಹನ ಇಲಾಖೆ ನಿರ್ಧರಿಸಿದೆ. ಈ ಮೂಲಕ ಆರೋಪಿಗೆ ತಕ್ಕ ಪಾಠ ಕಲಿಸುವ ಮುಂದಾಗಿದೆ ಎಂದು ತಿಳಿದು ಬಂದಿದೆ.
ಲಾರಿಗೆ ಬೈಕ್ ಡಿಕ್ಕಿ - ಸವಾರನ ದೇಹಕ್ಕೆ ಹೊಕ್ಕ ರಾಡ್‌ಗಳು: ಇನ್ನೊಂದೆಡೆ, ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಬ್ಬಿಣದ ರಾಡ್‌ಗಳು ತುಂಬಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರನ ದೇಹಕ್ಕೆ ರಾಡ್‌ಗಳು ಹೊಕ್ಕಿವೆ. ಇದರಿಂದ ಮಾನಪ್ಪಡಂ ನಿವಾಸಿ ಶ್ರಧೇಶ್ (21) ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತ್ರಿಶೂರ್ ಜಿಲ್ಲೆಯ ಚೆಂಪುತ್ರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ 4.15ರ ಸುಮಾರಿಗೆ ಈ ಘಟನೆ ನಡೆದಿದೆ. ಮುಂದೆ ಸಂಚರಿಸುತ್ತಿದ್ದ ಲಾರಿ ಏಕಾಏಕಿ ನಿಲ್ಲಿಸಿದ್ದರಿಂದ ಹಿಂದೆ ಬರುತ್ತಿದ್ದ ಬೈಕ್ ಗುದ್ದಿದೆ. ಪರಿಣಾಮ ಲಾರಿಯಲ್ಲಿ ತುಂಬಿದ್ದ ಕಬ್ಬಿಣದ ರಾಡ್‌ಗಳು ಕುತ್ತಿಗೆ ಮತ್ತು ಎದೆಗೆ ಹೊಕ್ಕಿವೆ. ಈ ವಿಷಯ ತಿಳಿದ ತಕ್ಷಣ ಪೀಚಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ತಮ್ಮ ವಾಹನದಲ್ಲಿ ಶ್ರದ್ಧೇಶ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅಷ್ಟರಲ್ಲೇ, ಮೃತಪಟ್ಟಿರುವುದಾಗಿ ಎಂದು ವೈದ್ಯರು ಘೋಷಿಸಿದ್ದಾರೆ.
ಈ ಬಗ್ಗೆ ಲಾರಿ ಚಾಲಕ ಮಾತನಾಡಿದ್ದು, ಲಾರಿಗೆ ಮೇಲೆ ಹಾಕಿದ್ದ ಟಾರ್ಪಾಲಿನ್ ಹಾರಿ ಹೋಗಿದ್ದವು. ಇದರಿಂದ ಏಕಾಏಕಿ ಲಾರಿ ನಿಲ್ಲಿಸಬೇಕಾಯಿತು ಎಂದು ಹೇಳಿದ್ದಾರೆ. ಆದರೆ, ಸ್ಥಳೀಯರು ಲಾರಿಯನ್ನು ನಿಲ್ಲಿಸುವ ಯಾವುದೇ ಸೂಚನೆಯನ್ನೂ ಚಾಲಕ ನೀಡಿರಲಿಲ್ಲ. ಹಠಾತ್ ಆಗಿ ರಸ್ತೆ ಮಧ್ಯೆ ಲಾರಿ ನಿಲ್ಲಿಸಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಆರೋಪಿಸಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ರಸ್ತೆ ದಾಟುವಾಗ ವಾಹನ ಡಿಕ್ಕಿಯಾಗಿ ಐವರು ಮಹಿಳೆಯರ ದಾರುಣ ಸಾವು, 13 ಮಂದಿಗೆ ಗಾಯ