ವಿಶಾಖಪಟ್ಟಣ (ಆಂಧ್ರಪ್ರದೇಶ): ನಗರದಲ್ಲಿ ಶನಿವಾರ ಮಧ್ಯರಾತ್ರಿ ಕೆಲ ಯುವಕರು ಬೈಕ್ ರ‍್ಯಾಲಿ ನಡೆಸಿ ಅವಾಂತರ ಸೃಷ್ಟಿಸಿದ್ದಾರೆ. ಮಾರ್ಗ ಮಧ್ಯೆ ಬಂದ ಆರ್ಟಿಸಿ ಬಸ್ನ್ನು ಧ್ವಂಸಗೊಳಿಸಿ, ಚಾಲಕನ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ.
ಮಧ್ಯರಾತ್ರಿ 12 ಗಂಟೆಯಿಂದ 3 ಗಂಟೆಯವರೆಗೆ ಕೆಲ ಯುವಕರು ದ್ವಿಚಕ್ರ ವಾಹನದಲ್ಲಿ ಟ್ರಿಪಲ್ ಸವಾರಿ ಮಾಡಿದ್ದಾರೆ. ಆರ್ಟಿಸಿ ಕಾಂಪ್ಲೆಕ್ಸ್, ಸ್ವರ್ಣ ಭಾರತಿ ಸ್ಟೇಡಿಯಂ, ಇಂಟರ್ ಸೆಕ್ಷನ್ ಹಾಗೂ ಬೀಚ್ ರಸ್ತೆಯಲ್ಲಿ ಬೈಕ್ನಲ್ಲಿ ಸಂಚರಿಸಿ ಪ್ರಯಾಣಿಕರಿಗೆ ತೊಂದರೆ ನೀಡಿದ್ದಾರೆ. ಆರ್ಟಿಸಿ ಕಾಂಪ್ಲೆಕ್ಸ್ ಜಂಕ್ಷನ್ನಲ್ಲಿ ಹೋಗುತ್ತಿದ್ದ ಆರ್ಟಿಸಿ ಬಸ್ ನಿಲ್ಲಿಸಿದ್ದಾರೆ. ಬಸ್ ಚಾಲಕ ದಾರಿ ಮಾಡಿಕೊಡುವಂತೆ ಕೇಳಿದಾಗ ಕೋಪಗೊಂಡ ಯುವಕರು ಬಸ್ ಧ್ವಂಸಗೊಳಿಸಿದ್ದಾರೆ.