ಛಾಪ್ರಾ (ಬಿಹಾರ):ಬಿಹಾರದಲ್ಲಿ ಮರಳು ಮಾಫಿಯಾದವರು ಅಟ್ಟಹಾಸ ಮರೆದಿದ್ದಾರೆ. ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ವಾಹನಗಳ ತಪಾಸಣೆ ಮಾಡುತ್ತಿದ್ದ ಅಧಿಕಾರಿಗಳನ್ನೇ ಹತ್ಯೆ ಮಾಡಲು ದಂಧೆಕೋರರು ಯತ್ನಿಸಿದ್ದಾರೆ. ಓರ್ವ ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಗಣಿ ಇಲಾಖೆಯ ಚಾಲಕ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಇಲ್ಲಿನ ಛಾಪ್ರಾ ಜಿಲ್ಲೆಯ ಸೋನೆಪುರ್ ಪ್ರದೇಶದಲ್ಲಿ ಘಟನೆ ನಡೆದಿದೆ. ಗಣಿ ಇಲಾಖೆಯ ನಿರೀಕ್ಷಕ ಅಂಜನಿ ಕುಮಾರ್ ನೇತೃತ್ವದಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ಶಿವ ಬಚ್ಚನ್ ಚೌಕ್‌ನಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿತ್ತು. ಈ ಲಾರಿಯೊಂದರಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡಿದ ಮರಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಹೀಗಾಗಿ, ಲಾರಿಯನ್ನು ವಶಕ್ಕೆ ಪಡೆದ ನಿರೀಕ್ಷಕ ಅಂಜನಿ ಕುಮಾರ್, ಇದನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಬರುವಂತೆ ಚಾಲಕನಿಗೆ ಸೂಚಿಸಿದ್ದಾರೆ.
ಅಂತೆಯೇ, ಅಧಿಕಾರಿ ಜೊತೆಗಿದ್ದ ಕಾನ್ಸ್‌ಟೇಬಲ್‌ಗಳು ಮತ್ತೊಂದು ಕಾರಿನಲ್ಲಿ ಈ ಲಾರಿ ಚಾಲಕ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲು ಅದರ ಹಿಂದೆಯೇ ಬರುತ್ತಿದ್ದರು. ಆಗ ಬೊಲೆರೋ ವಾಹನದಲ್ಲಿ ಬಂದು ಐವರು ದುಷ್ಕರ್ಮಿಗಳು ಮಾರ್ಗ ಮಧ್ಯೆ ಲಾರಿ ನಿಲ್ಲಿಸಿದ್ದಾರೆ. ಅಲ್ಲದೇ, ಅದರ ಕೀ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಇದರಿಂದ ಪೊಲೀಸರು ಮತ್ತು ಮಾಫಿಯಾದ ದುಷ್ಕರ್ಮಿಗಳ ನಡುವೆ ಮಾತಿನ ಚಕಮಕಿ ಉಂಟಾಗಿದೆ.
ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲು ಯತ್ನ: ಇದನ್ನು ಗಮನಿಸಿದ ನಿರೀಕ್ಷಕ ಅಂಜನಿ ಕುಮಾರ್ ಕೂಡ ಅಲ್ಲಿಗೆ ಆಗಮಿಸಿದ್ದಾರೆ. ಈ ವೇಳೆ ಮತ್ತಷ್ಟು ಗಲಾಟೆ ಹೆಚ್ಚಾಗಿದೆ. ಪೊಲೀಸ್ ಸಿಬ್ಬಂದಿಯೊಂದಿಗೆ ದಂಧೆಕೋರರು ಹಲ್ಲೆ ಮಾಡಲು ಶುರು ಮಾಡಿದ್ದಾರೆ. ಅಲ್ಲದೇ, ಅಧಿಕಾರಿ ಸೇರಿ ಸಿಬ್ಬಂದಿ ಮೇಲೆ ತನ್ನ ವಾಹನವನ್ನು ಹತ್ತಿಸಲು ಮುಂದಾಗಿದ್ದಾರೆ. ಇಷ್ಟೇ ಅಲ್ಲ, ಸೀಮೆಎಣ್ಣೆ ಸುರಿದು ಅಧಿಕಾರಿಯ ಕಾರಿಗೆ ಬೆಂಕಿ ಹಚ್ಚಲು ಕೂಡ ದುರುಳರು ಯತ್ನಿಸಿದ್ದಾರೆ.
ಈ ಪರಿಸ್ಥಿತಿಯನ್ನು ಅರಿತುಕೊಂಡು ಅಂಜನಿ ಕುಮಾರ್ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಘಟನೆಯಲ್ಲಿ ವಿಶೇಷ ಸಹಾಯಕ ಪಡೆ (ಎಸ್‌ಎಎಫ್)ಯ ಕಾನ್ಸ್‌ಟೇಬಲ್ ಬಿನೇಶ್ವರಿ ಮಂಡಲ್ ಹಾಗೂ ಗಣಿ ಇಲಾಖೆಯ ಚಾಲಕ ಗಾಯಗೊಂಡಿದ್ದಾರೆ. ಮರಳು ಮಾಫಿಯಾದವರ ಕೃತ್ಯದ ಬಗ್ಗೆ ಗಣಿ ನಿರೀಕ್ಷಕ ಸೋನೆಪುರ್ ಠಾಣೆ ಪೊಲೀಸರಿಗೆ ದೂರು ನೀಡಿ ಸಂಪೂರ್ಣ ಘಟನೆಯನ್ನು ವಿವರಿಸಿದ್ದಾರೆ.
''ವಾಹನಗಳ ತಪಾಸಣೆಯಲ್ಲಿ ಒಟ್ಟು 10 ಲಾರಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಇದರಲ್ಲಿ ಲಾರಿಯೊಂದರಲ್ಲಿ ಅಕ್ರಮ ಮರಳು ಸಾಗಾಟ ಮಾಡುವುದು ಖಚಿತವಾಗಿತ್ತು. ಹೀಗಾಗಿ ಆ ಲಾರಿಯನ್ನು ಠಾಣೆಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಆದರೆ, ಈ ವೇಳೆ ಐವರು ದುಷ್ಕರ್ಮಿಗಳು ಬಂದು ನಮ್ಮನ್ನು ಜೀವಂತವಾಗಿ ಸುಡಲು ಯತ್ನಿಸಿದ್ದಾರೆ. ಈ ಅಕ್ರಮ ದಂಧೆಕೋರರ ವಿರುದ್ಧ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ತೆಗೆದುಕೊಳ್ಳಬೇಕು'' ಎಂದು ತಮ್ಮ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಕುಸ್ತಿಪಟು ಮೇಲೆ ಅಪರಿಚಿತ ವ್ಯಕ್ತಿಗಳಿಂದ ಗುಂಡಿನ ದಾಳಿ..