ಗೋಪಾಲಗಂಜ್ (ಬಿಹಾರ): ಮೊಮೊ ತಿನ್ನುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 25 ವರ್ಷದ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಆಹಾರದಲ್ಲಿ ವಿಷ ಹಾಕಿ ಕೊಲೆ ಮಾಡಿರುವ ಶಂಕೆಯನ್ನು ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಸತ್ಯಾಸತ್ಯತೆ ತಿಳಿಯಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಗೋಪಾಲಗಂಜ್ ಜಿಲ್ಲೆಯ ಥಾವೆ ಪೊಲೀಸ್ ಠಾಣೆ ವ್ಯಾಪ್ತಿಯ ಸಿಹೋರ್ವಾ ಗ್ರಾಮದ ವಿಪಿನ್ ಕುಮಾರ್ ಎಂಬಾತನೇ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ಗೋಪಾಲ್‌ಗಂಜ್ ಮತ್ತು ಸಿವಾನ್ ಜಿಲ್ಲೆಗಳ ಗಡಿಯಲ್ಲಿರುವ ಗ್ಯಾನಿ ಮೋರ್ ಬಳಿಯ ರಸ್ತೆಬದಿಯಲ್ಲಿ ಈ ಯುವಕನ ಶವ ಪತ್ತೆಯಾಗಿದೆ. ಸದ್ಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಮಲಗಿದ್ದಲ್ಲಿಯೇ ಉತ್ತರ ಪ್ರದೇಶ ಮೂಲದ ಇಬ್ಬರು ಯುವಕರ ಅನುಮಾನಾಸ್ಪದ ಸಾವು!
ವಿಶುನ್ ಮಾಂಝಿ ಎಂಬುವವರ ಪುತ್ರನಾದ ವಿಪಿನ್ ಕುಮಾರ್ ಮೊಬೈಲ್ ಫೋನ್ ರಿಪೇರಿ ಅಂಗಡಿ ನಡೆಸುತ್ತಿದ್ದರು. ಈ ಮೊಬೈಲ್ ರಿಪೇರಿ ಅಂಗಡಿಯು ಸಿವಾನ್ ಜಿಲ್ಲೆಯ ಬಧರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಗಿಯಾನಿ ಮೋರ್ ಬಳಿ ಇದೆ. ಇಬ್ಬರು ಅಪರಿಚಿತ ಯುವಕರು ವಿಪಿನ್ ಕುಮಾರ್ನನ್ನು ಅಂಗಡಿಯಿಂದ ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದರು. ಆದರೆ, ನಂತರ ಆತ ಹಿಂತಿರುಗಲಿಲ್ಲ ಎಂದು ತಂದೆ ವಿಶುನ್ ಮಾಂಝಿ ಹೇಳಿದ್ದಾರೆ.
ಬಳಿಕ ಕೆಲವರು ನನ್ನ ಮಗ ವಿಪಿನ್ ಕುಮಾರ್ ರಸ್ತೆಬದಿಯಲ್ಲಿ ಬಿದ್ದಿರುವುದನ್ನು ಕಂಡು ನಮಗೆ ಗಮನಕ್ಕೆ ತಂದರು. ಅಂತೆಯೇ ನಾವು ಸ್ಥಳಕ್ಕೆ ತೆರಳಿ, ನಂತರ ಬಧರಿಯಾ ಪೊಲೀಸ್ ಠಾಣೆಗೆ ಈ ಘಟನೆ ಬಗ್ಗೆ ಮಾಹಿತಿ ಕೊಟ್ಟಿದ್ದೆವು. ಆದರೆ, ಬಧರಿಯಾ ಪೊಲೀಸರಿಗೆ ನೆರವಿಗೆ ಬರಲಿಲ್ಲ. ಈ ಘಟನೆಯು ಥಾವೆ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದ್ದರು ಎಂದು ಆರೋಪಿಸಿರುವ ವಿಶುನ್ ಮಾಂಝಿ, ಮಗನನ್ನು ವಿಷ ಹಾಕಿ ಕೊಲೆ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಬಗ್ಗೆ ಥಾವೆ ಪೊಲೀಸ್ ಮುಖ್ಯಸ್ಥ ಶಶಿ ರಂಜನ್ ಪ್ರತಿಕ್ರಿಯಿಸಿ, ಮೃತ ವಿಪಿನ್ ಕುಮಾರ್ ತನ್ನ ಸ್ನೇಹಿತರೊಂದಿಗೆ 150 ಮೊಮೊಗಳನ್ನು ತಿನ್ನುವ ಸ್ಪರ್ಧೆ ಕೊಟ್ಟಿದ್ದ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಮೊಮೊಸ್ ತಿಂದ ಬಳಿಕ ಆತನ ಆರೋಗ್ಯ ಹದಗೆಟ್ಟಿದೆ. ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈಗಾಗಲೇ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಇದರ ವರದಿ ಬಂದ ನಂತರವಷ್ಟೇ ಸಾವಿಗೆ ಕಾರಣ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ: ಆ್ಯಸಿಡ್ ಎರಚಿ, ನಾಲಿಗೆ ಕತ್ತರಿಸಿ, ಕಣ್ಣು - ಹಲ್ಲು ಕಿತ್ತಿದ್ದ ದುರುಳರು!