ಪಾಟ್ನಾ (ಬಿಹಾರ): ಇಲ್ಲಿನ ಖಗಾರಿಯಾ ಜಿಲ್ಲೆಯ ಸಹಾಯಕ ಶಿಕ್ಷಕಿಯೊಬ್ಬರು ಶಾಲೆಗೆ ಗೈರಾಗಿ ಗುಜರಾತ್ನಲ್ಲಿ ಇದ್ದುಕೊಂಡು ಸಂಬಳ ಪಡೆಯುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಕಳೆದ ಐದು ತಿಂಗಳುಗಳಿಂದ ಶಿಕ್ಷಕಿಯು ಸಂಬಳ ಪಡೆದು ವಂಚಿಸುತ್ತಿರುವುದಾಗಿ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬ್ಲಾಕ್ ಶಿಕ್ಷಣಾಧಿಕಾರಿ ರಾಮ್ ಉದಯ್ ಮಹತೋ ಅವರು ಶಿಕ್ಷಕಿಯು ಕಾರ್ಯನಿರ್ವಹಿಸುತ್ತಿದ್ದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ ಆರೋಪಿ ಶಿಕ್ಷಕಿ ಸೀಮಾ ಕುಮಾರಿ ಕಳೆದ ಕೆಲವು ತಿಂಗಳುಗಳಿಂದ ಸೇವೆಗೆ ಗೈರಾಗಿರುವುದು ತಿಳಿದುಬಂದಿದೆ. ಶಿಕ್ಷಕಿಯನ್ನು ಡೆಪ್ಯೂಟೇಶನ್ ಮೇಲೆ ಇಲ್ಲಿನ ಸರ್ಕಾರಿ ಶಾಲೆಗೆ ನಿಯೋಜಿಸಲಾಗಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದ ಶಿಕ್ಷಣಾಧಿಕಾರಿಗಳು, ಶಿಕ್ಷಣ ಇಲಾಖೆಯಲ್ಲಿ ಪ್ರಶ್ನಿಸಿದ್ದಾರೆ. ಭದಾಸ್ ಹಳ್ಳಿಯಲ್ಲಿರುವ ಅವರ ಮೂಲ ಶಾಲೆಯ ಮುಖ್ಯೋಪಾಧ್ಯಾಯರು ತೋರಿಸಿದ ಹಾಜರಾತಿಯ ಆಧಾರದ ಮೇಲೆ ಇಲಾಖೆಯು ಮಾಸಿಕ ವೇತನವನ್ನು ಬಿಡುಗಡೆ ಮಾಡುತ್ತಿತ್ತು ಎಂದು ತಿಳಿದುಬಂದಿದೆ.
"ನಿಯೋಜನೆಗೊಂಡು ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕಿಯು ಸೇವೆಗೆ ಗೈರಾಗಿರುವ ವರದಿಯನ್ನು ಪ್ರಾಥಮಿಕ ಶಾಲೆಯಿಂದ ಭದಾಸ್‌ನಲ್ಲಿನ ಮೂಲ ಶಾಲೆಗೆ ಕಳುಹಿಸುತ್ತಿತ್ತು. ಬಳಿಕ ಅಲ್ಲಿನ ಶಾಲಾ ಮುಖ್ಯೋಪಾಧ್ಯಾಯ ವಿಕಾಸ್ ಕುಮಾರ್ ಅವರು ಗೈರು ಹಾಜರಾತಿ ವರದಿಯನ್ನು ಬದಲಿಸಿ ಹಾಜರಾತಿ ವರದಿಯನ್ನು ಶಿಕ್ಷಣ ಇಲಾಖೆಗೆ ನೀಡುತ್ತಿದ್ದರು. ಹಾಜರಾತಿಯ ಆಧಾರದ ಮೇಲೆ ಇಲಾಖೆಯು 2022ರ ಸೆಪ್ಟೆಂಬರ್ ತಿಂಗಳಿನಿಂದ ವೇತನವನ್ನು ನೀಡುತ್ತಾ ಬಂದಿತ್ತು" ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ಶಿಕ್ಷಣ ಇಲಾಖೆಗೆ ಕ್ರಮಕೈಗೊಳ್ಳುವಂತೆ ಸೂಚಿಸಿದ್ದು, ಶಿಕ್ಷಕಿ ಸೀಮಾ ಕುಮಾರಿ ಮತ್ತು ಮುಖ್ಯೋಪಾಧ್ಯಾಯ ವಿಕಾಸ್ ಕುಮಾರ್ ವೇತನವನ್ನು ತಡೆಹಿಡಿಯುವಂತೆ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ವರದಿ ಕಳುಹಿಸಲಾಗಿದೆ. ಇಬ್ಬರ ವೇತನವನ್ನು ತಡೆಹಿಡಿಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು, 400ಕ್ಕೂಅಧಿಕ ಶಿಕ್ಷಕರು ಈ ಡೆಪ್ಯೂಟೇಶನ್ ಅನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಶಾಲೆಗೆ ಹೋಗದೆ ವಂಚಿಸುತ್ತಿರುವ ಬಗ್ಗೆ ಶಿಕ್ಷಣ ಇಲಾಖೆ ನಿಗಾವಹಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಮುಂಬೈನಲ್ಲಿ ಮೂವರಿಂದ ಆತ್ಮಹತ್ಯೆ ಯತ್ನ: ಕಳೆದ ಸೋಮವಾರ ಮಧ್ಯಾಹ್ನ ಮುಂಬೈನ ಮಹಾರಾಷ್ಟ್ರ ಸರ್ಕಾರದ ಸಚಿವಾಲಯದ ಮುಂದೆ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಮತ್ತಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಇಲ್ಲಿನ ಧೂಳೆ ಎಂಐಡಿಸಿ ಪ್ರದೇಶದ ನಿವಾಸಿ ಶೀತಲ್ ಗಡೇಕರ್ (47) ಮೃತ ಮಹಿಳೆ. ಶೀತಲ್ ಅವರ ಪತಿ ರವೀಂದ್ರ ಗಡೇಕರ್ ಅವರು ಧೂಳೆ ಎಂಐಡಿಸಿ ಪ್ರದೇಶದಲ್ಲಿ 9 ಗುಂಟೆ ಜಾಗ ಹೊಂದಿದ್ದರು. ಈ ಜಾಗವನ್ನು ಒಬ್ಬರಿಗೆ ಗುತ್ತಿಗೆ ನೀಡಿದ್ದರು. ಗುತ್ತಿಗೆ ಪಡೆದ ವ್ಯಕ್ತಿ 2010ರಲ್ಲಿ ಅಂದಿನ ಎಂಐಡಿಸಿ ಅಧಿಕಾರಿಗಳ ಮೂಲಕ ನಕಲಿ ದಾಖಲೆ ಸೃಷ್ಟಿಸಿ ಈ ಜಾಗವನ್ನು ತನ್ನ ಹೆಸರಿಗೆ ಮಾಡಿಕೊಂಡು ವಂಚಿಸಿದ್ದನು ಎಂದು ಆರೋಪಿಸಲಾಗಿದೆ. ಈ ಹಿನ್ನಲೆಯಲ್ಲಿ ಸಚಿವಾಲಯದ ಮುಖ್ಯ ದ್ವಾರದ ಮುಂಭಾಗದಲ್ಲಿ ಕೀಟನಾಶಕ ಸೇವಿಸಿ ಶೀತಲ್ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ತಕ್ಷಣವೇ ಅವರನ್ನು ಸರ್ ಜೆಜೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ :ಮುಂಬೈ: ಸಚಿವಾಲಯದ ಮುಂದೆ ಇಬ್ಬರು ಮಹಿಳೆಯರು, ಓರ್ವ ದಿವ್ಯಾಂಗ ವ್ಯಕ್ತಿಯಿಂದ ಆತ್ಮಹತ್ಯೆ ಯತ್ನ