ಸಮಸ್ತಿಪುರ (ಬಿಹಾರ): ಕೃಷಿಗಾಗಿ ಮಾಡಿದ ಸಾಲದ ಕಂತು ಕಟ್ಟುವುದಕ್ಕೆ ಹಣ ಹೊಂದಿಸಲು ಬಿಹಾರದ ಸಮಸ್ತಿಪುರ ಜಿಲ್ಲೆಯ ಮಹಿಳೆಯೊಬ್ಬರು ರಕ್ತದಾನ ಮಾಡಲು ಮುಂದಾದ ಪ್ರಕರಣ ವರದಿಯಾಗಿದೆ. ಸರ್ಕಾರಿ ಆಸ್ಪತ್ರೆಯ ರಕ್ತ ಭಂಡಾರ (Blood Bank)ಕ್ಕೆ ಮಹಿಳೆ ತೆರಳಿದ್ದು, ರಕ್ತದಾನ ಮಾಡಲು ನಿರ್ಧರಿಸಿದ ಆಕೆಯ ಪರಿಸ್ಥಿತಿಯನ್ನು ಕೇಳಿ ಅಲ್ಲಿನ ನೌಕರರು ತಬ್ಬಿಬ್ಬುಗೊಂಡಿದ್ದಾರೆ.
ಇಲ್ಲಿನ ವಾರಿಸ್‌ನಗರದ ನಿವಾಸಿ ಗುಲ್ನಾಜ್ ದೇವಿ ತನ್ನ ರಕ್ತದಾನ ಮೂಲಕ ಹಣ ಹಂದಿಸಲು ತೀರ್ಮಾನಿಸಿದ ಮಹಿಳೆ. ಇವರ ಕುಟುಂಬ ಕೃಷಿ ವೆಚ್ಚವನ್ನು ಭರಿಸಲು 35 ಸಾವಿರ ರೂಪಾಯಿ ಸಾಲ ಮಾಡಿತ್ತು. ಇದರ 11 ಸಾವಿರ ರೂಪಾಯಿ ಕಂತು ಕಟ್ಟಬೇಕಿತ್ತು. ಕಂತು ಪಾವತಿಸಲು ಹಣದ ವ್ಯವಸ್ಥೆ ಮಾಡಲು ಎಲ್ಲ ರೀತಿಯಲ್ಲಿ ಪ್ರಯತ್ನಿಸಿದ್ದರು. ಆದರೆ, ಯಾವುದೇ ಫಲ ಸಿಕ್ಕಿರಲಿಲ್ಲ. ಆದ್ದರಿಂದ ಅಂತಿಮವಾಗಿ ರಕ್ತದಾನ ಮಾಡಲು ಯೋಚಿಸಿದ್ದರು.
ಇದನ್ನೂ ಓದಿ:ಸಾಲಗಾರರ ಒತ್ತಡ ತಾಳದೇ ಅಂಡರ್ 16 ತಂಡದ ಕ್ರಿಕೆಟಿಗ ಸಾವಿಗೆ ಶರಣು
ಅಂತೆಯೇ, ಗುಲ್ನಾಜ್ ದೇವಿ ತನ್ನ ಪತಿ ಕಮಲೇಶ್ ರಾಮ್ ಮತ್ತು ಇಬ್ಬರು ಮಕ್ಕಳೊಂದಿಗೆ ಸರ್ಕಾರಿ ಆಸ್ಪತ್ರೆಯ ಬ್ಲಡ್ ಬ್ಯಾಂಕ್ಗೆ ಬಂದಿದ್ದರು. ಆಗ ಸಾಲದ ಕಂತಿನ ಹಣಕ್ಕಾಗಿ ರಕ್ತದಾನ ಮಾಡಲು ಬಂದ ವಿಷಯ ತಿಳಿದು ಸಿಬ್ಬಂದಿ ಗಾಬರಿಯಾಗಿದ್ದಾರೆ. ಅಲ್ಲದೇ, ಈ ವಿಷಯವನ್ನು ತಮ್ಮ ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ. ಗುಲ್ನಾಜ್ ದೇವಿ ಮಾತನಾಡಿ, "ಕೃಷಿ ಪರಿಕರಗಳನ್ನು ಖರೀದಿಸಲು ಗುಂಪು ಸಾಲ ಮಾಡಿಕೊಂಡಿದ್ದೆ. ಆದರೆ, ಕೃಷಿಯಲ್ಲಿ ಸಾಕಷ್ಟು ಲಾಭ ಗಳಿಸಲು ಸಾಧ್ಯವಾಗಲಿಲ್ಲ. ಈಗ 11,000 ರೂ. ಕಂತು ಕಟ್ಟಬೇಕಾಗಿದೆ. ಇದಕ್ಕೆ ಹಣ ಹೊಂದಿಸಬೇಕಿದೆ. ಆದ್ದರಿಂದ ರಕ್ತದಾನ ಮಾಡಿ ಹಣ ಪಡೆಯಲು ಆಸ್ಪತ್ರೆಗೆ ತಲುಪಿದ್ದೇವೆ" ಎಂದು ತಿಳಿಸಿದ್ದಾರೆ.
ವಾರಿಸ್‌ನಗರ ಬ್ಲಾಕ್ ಅಭಿವೃದ್ಧಿ ಅಧಿಕಾರಿ ರಂಜಿತ್ ಕುಮಾರ್ ಪ್ರತಿಕ್ರಿಯಿಸಿ, "ಸಾಲದ ಕಂತು ಕಟ್ಟಲೆಂದು ರಕ್ತದಾನ ಮಾಡಲು ಮಹಿಳೆ ಆಸ್ಪತ್ರೆಗೆ ಬಂದ ಘಟನೆಯನ್ನು ಗಮನಿಸಿದ್ದೇವೆ. ಈ ಸಂಬಂಧ ಕುಟುಂಬವನ್ನು ಸಂಪರ್ಕಿಸಲಾಗಿದೆ. ತಮ್ಮ ಸಮಸ್ಯೆ ಬಗ್ಗೆ ಮಹಿಳೆ ಅರ್ಜಿ ಸಲ್ಲಿಸಿದ್ದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಅವರ ಕುಟುಂಬಕ್ಕೂ ಸಹಾಯ ಮಾಡಲು ಪ್ರಯತ್ನಿಸಬಹುದು" ಎಂದು ಹೇಳಿದ್ದಾರೆ.
ಇದನ್ನೂ ಓದಿ:ಆನ್‌ಲೈನ್ ಗೇಮಿಂಗ್ ಗೀಳಿಗೆ ಬಿದ್ದು ₹8 ಲಕ್ಷ ಸಾಲ: ಇಬ್ಬರು ಚಿಕ್ಕ ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ