ದರ್ಭಾಂಗ (ಬಿಹಾರ):ವಿಶ್ವವಿದ್ಯಾಲಯಗಳಲ್ಲಿ ಸಣ್ಣ ಪುಟ್ಟ ಅವಾಂತರಗಳು ಸೃಷ್ಟಿಯಾಗುವುದು ಸಾಮಾನ್ಯ. ಆದರೆ, ಬಿಹಾರದ ದರ್ಭಾಂಗದಲ್ಲಿರುವ ಲಲಿತ್ ನಾರಾಯಣ ಮಿಥಿಲಾ ವಿಶ್ವವಿದ್ಯಾಲಯ (ಎಲ್ಎನ್ಎಂಯು)ವು ಪರೀಕ್ಷೆಯ ಹಾಲ್ ಟಿಕೆಟ್ನಲ್ಲಿ ರಾಜ್ಯಪಾಲ ಫಗು ಚೌಹಾಣ್ ಅವರ ಭಾವಚಿತ್ರ ಮುದ್ರಿಸಿ ನಗೆಪಾಟಲಿಗೆ ಈಡಾಗಿದೆ.
ಹೌದು, ಲಲಿತ್ ನಾರಾಯಣ ಮಿಥಿಲಾ ವಿಶ್ವವಿದ್ಯಾಲಯವು ಎಡವಟ್ಟುಗಳಿಂದಲೇ ಸುದ್ದಿಯಲ್ಲಿರುತ್ತದೆ. ಈಗಲೂ ರಾಜ್ಯಪಾಲರ ಭಾವಚಿತ್ರವಿರುವ ಪ್ರವೇಶಪತ್ರ ನೀಡಿ ಮಹಾ ಪ್ರಮಾದ ಮಾಡಿದೆ. ಸದ್ಯ ಈ ಹಾಲ್ಟಿಕೆಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದೇ ಸೆಪ್ಟೆಂಬರ್ 12ರಿಂದ ನಡೆಯಲಿರುವ ಬಿಎ ವಿಭಾಗ-3ನೇ ಪರೀಕ್ಷೆಯ ಹಾಲ್ಟಿಕೆಟ್ನಲ್ಲಿ ಬಿಹಾರ ರಾಜ್ಯಪಾಲ ಫಗು ಚೌಹಾಣ್ ಅವರ ಭಾವಚಿತ್ರವನ್ನು ಮುದ್ರಿಸಿ, ಭಾವಚಿತ್ರದ ಕೆಳಗಡೆ ಅವರ ಹೆಸರನ್ನೂ ಬರೆಯಲಾಗಿದೆ.