ಪಾಟ್ನಾ, ಬಿಹಾರ್:ಬಿಹಾರದ ಪಾಟ್ನಾ ಮತ್ತು ಗಯಾ ಜಿಲ್ಲೆಗಳಲ್ಲಿ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ 'ಬ್ಲೂಟೂತ್ ಸಾಧನಗಳನ್ನು' ಬಳಸಿದ ಆರೋಪದ ಮೇಲೆ 49 ಪರೀಕ್ಷಾರ್ಥಿಗಳನ್ನು ಬಿಹಾರ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಗಯಾದಾದ್ಯಂತ 36 ಮತ್ತು ಪಾಟ್ನಾದಲ್ಲಿ 13 ಪರೀಕ್ಷಾರ್ಥಿಗಳು ಬ್ಲೂಟೂತ್ ಸಾಧನಗಳನ್ನು ಬಳಸಿ ಸಿಕ್ಕಿಬಿದ್ದಿದ್ದಾರೆ. ಇಂತಹ ದಂಧೆ ನಡೆಸುವರ ಬಗ್ಗೆ ನಾವು ಮಾಹಿತಿಯನ್ನು ಈಗಾಗಲೇ ಹೊಂದಿದ್ದೇವೆ ಎಂದು ಗಯಾ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಹೇಳಿದರು.
ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯನ್ನು ಪಾಟ್ನಾದ ಅನೇಕ ಕೇಂದ್ರಗಳಲ್ಲಿ ನಡೆಸಲಾಯಿತು. ಕಡಮ್ಕುವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಪಿಎನ್ ಆಂಗ್ಲೋ ಸಂಸ್ಕೃತ ಶಾಲೆಯಲ್ಲಿಯೂ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ಈ ಕೇಂದ್ರದಲ್ಲಿ ಬ್ಲೂಟೂತ್ ಮೂಲಕ ನಕಲು ಮಾಡುತ್ತಿದ್ದ 13 ಅಭ್ಯರ್ಥಿಗಳನ್ನು ಬಂಧಿಸಲಾಗಿದ್ದು, ನಕಲು ಮಾಡಿ ಸಿಕ್ಕಿಬಿದ್ದ ಅಭ್ಯರ್ಥಿಗಳಲ್ಲಿ 11 ಯುವಕರು ಮತ್ತು ಇಬ್ಬರು ಹುಡುಗಿಯರು ಇರುವುದು ತಿಳಿದು ಬಂದಿದೆ.
ಮತ್ತೊಂದು ಘಟನೆಯಲ್ಲಿ ಲಖಿಂಪುರ ಖೇರಿಯ ವಿದ್ಯಾರ್ಥಿಯು ಉತ್ತರ ಪ್ರದೇಶದ ಅಧೀನ ಸಿಬ್ಬಂದಿ ಆಯ್ಕೆ ಆಯೋಗದ ಪ್ರಾಥಮಿಕ ಅರ್ಹತಾ ಪರೀಕ್ಷೆಯಲ್ಲಿ (ಯುಪಿಎಸ್ಎಸ್ಎಸ್ಸಿ ಪಿಇಟಿ) ಇನ್ನೊಬ್ಬ ವ್ಯಕ್ತಿಯ ಪ್ರವೇಶ ಪತ್ರವನ್ನು ಬಳಸಿಕೊಂಡು ಪರೀಕ್ಷೆ ಬರೆಯುತ್ತಿರುವುದು ಕಂಡುಬಂದಿದೆ. ಪ್ರಕರಣ ದಾಖಲಿಸಿಕೊಂಡು ವಿದ್ಯಾರ್ಥಿಯನ್ನೂ ಬಂಧಿಸಲಾಗಿದೆ ಎಂದು ಪಿಲಿಭಿತ್ ಹೆಚ್ಚುವರಿ ಎಸ್‌ಪಿ ಪವಿತ್ರಾ ಮೋಹನ್ ತ್ರಿಪಾಠಿ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಓದಿ:ಹಿಜಾಬ್ ತೆಗೆಯಲು ಹೇಳಿದ್ದಕ್ಕೆ ಪರೀಕ್ಷೆ ಬಿಟ್ಟು ವಿದ್ಯಾರ್ಥಿನಿಯರ ಪ್ರತಿಭಟನೆ