ಕರ್ನಾಟಕ

karnataka

ETV Bharat / bharat

1,500 ರೂ.ಗಾಗಿ ಚಿಕಿತ್ಸೆ ನೀಡದ ವೈದ್ಯರು, ಗರ್ಭಿಣಿ ಸಾವು: ಅಂತ್ಯಸಂಸ್ಕಾರಕ್ಕೆ ₹3 ಸಾವಿರ ಕೊಟ್ಟ ಮುಖಂಡ! - ಬಿಹಾರದಲ್ಲಿ ವೈದ್ಯರ ಹಣದಾಸೆಗೆ ಗರ್ಭಿಣಿ ಸಾವು

ಕೇವಲ 1,500 ರೂಪಾಯಿ ಹಣ ನೀಡಲಿಲ್ಲ ಎಂಬ ಕಾರಣಕ್ಕಾಗಿ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಿದ್ದರಿಂದ ಗರ್ಭಿಣಿ ಪ್ರಾಣ ಕಳೆದುಕೊಂಡ ಹೃದಯವಿದ್ರಾವಕ ಘಟನೆ ಬಿಹಾರದಲ್ಲಿ ವರದಿಯಾಗಿದೆ.

pregnant-woman-dies
ಗರ್ಭಿಣಿ ಸಾವು

By

Published : Jan 5, 2023, 10:05 AM IST

ವೈಶಾಲಿ (ಬಿಹಾರ):ವೈದ್ಯೋ ನಾರಾಯಣೋ ಹರಿ ಎಂಬ ಲೋಕಪ್ರಸಿದ್ಧ ಮಾತಿದೆ. ಆದರೆ ಇಲ್ಲಿ ಆ ಮಾತು ಸುಳ್ಳಾಗಿದೆ. ಹೆರಿಗೆ ನೋವು ಕಾಣಿಸಿಕೊಂಡಿದ್ದ ಗರ್ಭಿಣಿಗೆ ಚಿಕಿತ್ಸೆ ಸಿಗದೆ ಆಕೆಯ ಪ್ರಾಣಪಕ್ಷಿ ಹಾರಿಹೋಗಿದೆ. ಬಡ ಕುಟುಂಬವೊಂದು ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಲು ಕೇವಲ 1,500 ರೂಪಾಯಿ ನೀಡಲಿಲ್ಲ ಎಂಬ ಕಾರಣಕ್ಕಾಗಿ ಜೀವ ಉಳಿಸಬೇಕಿದ್ದ ವೈದ್ಯರು, ಸಿಬ್ಬಂದಿ ಮೃಗಗಳಂತೆ ವರ್ತಿಸಿದ್ದಾರೆ. ಆಸ್ಪತ್ರೆಗಳ ಹಣದ ಲಾಲಸೆಗೆ, ಪ್ರಪಂಚಕ್ಕೆ ಕಾಲಿಡಬೇಕಿದ್ದ ಪುಟ್ಟ ಕಂದಮ್ಮ ಮತ್ತು ತಾಯಿ ಇಬ್ಬರೂ ಕಣ್ಣುಮುಚ್ಚಿದ್ದಾರೆ.

ಬಿಹಾರದ ವೈಶಾಲಿಯಲ್ಲಿ ಎರಡು ದಿನಗಳ ಹಿಂದೆ ಈ ಮನಕಲುಕುವ ಘಟನೆ ನಡೆದಿದೆ. ಮಹಿಳೆಯ ಮರಣಾನಂತರ ವಿಷಯ ತಿಳಿದ ಸ್ಥಳೀಯ ಮುಖಂಡರೊಬ್ಬರು ಆಕೆಯ ಅಂತಿಮ ವಿಧಿವಿಧಾನಕ್ಕೆ 3 ಸಾವಿರ ರೂಪಾಯಿ ನೀಡಿದ್ದಾರೆ. ಜೀವ ಉಳಿಸಲು ನೆರವಿಗೆ ಬಾರದ ಹಣ, ಪ್ರಾಣ ಹೋದ ಮೇಲೆ ಚಿತೆಗೆ ಬೆಂಕಿ ಹಚ್ಚುವ ವೇಳೆ ಸಿಕ್ಕಿದೆ. ಎಂತಹ ನೋವಿನ ಸಂಗತಿ.!

ಘಟನೆಯ ವಿವರ:ವೈಶಾಲಿಯಲ್ಲಿ ಮಂಗಳವಾರ ತಡರಾತ್ರಿ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕುಟುಂಬಸ್ಥರು ಆಕೆಯನ್ನು ಸ್ತ್ರೀರೋಗ ತಜ್ಞರ ಬಳಿ ಕರೆದೊಯ್ದಿದ್ದಾರೆ. ಅವರು ಹಣ ಪಾವತಿಸಲು ಸೂಚಿಸಿದ್ದಾರೆ. ಬಡಕುಟುಂಬ ಶುಲ್ಕ ಪಾವತಿಸಲು ಆಗದ ಕಾರಣ ಅವರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಬಳಿಕ ಇನ್ನೊಂದು ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿಯೂ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಹೀಗೆ ಇಡೀ ರಾತ್ರಿ ನೋವಿನಿಂದ ಒದ್ದಾಡುತ್ತಿದ್ದ ಮಹಿಳೆಯೊಂದಿಗೆ ಕುಟುಂಬಸ್ಥರು ಒಂದು ಆರೋಗ್ಯ ಕೇಂದ್ರದಿಂದ ಇನ್ನೊಂದಕ್ಕೆ ಅಲೆದಾಡಿದ್ದಾರೆ. ಅಷ್ಟೊತ್ತಿಗಾಗಲೇ ಗರ್ಭಿಣಿ ಸ್ಥಿತಿ ಗಂಭೀರವಾಗಿದೆ. ಕೊನೆಗೆ ಖಾಸಗಿ ಆಸ್ಪತ್ರೆಯೊಂದು ದಾಖಲಿಸಿಕೊಂಡು, ಪ್ರಾಥಮಿಕ ಚಿಕಿತ್ಸೆ ನೀಡಿದೆ. 500 ರೂಪಾಯಿ ಪಡೆದು ಆಕ್ಸಿಜನ್​ ಮಾಸ್ಕ್​ ಹಾಕಿದ ಅಲ್ಲಿನ ವೈದ್ಯರು ಬಳಿಕ, ಮಹಿಳೆಯ ಸ್ಥಿತಿ ತುಸು ಗಂಭೀರವಾಗಿದೆ. ಬೇರೊಂದು ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ತಿಳಿಸಿದ್ದಾರೆ.

ಆಂಬ್ಯುಲೆನ್ಸ್​ನಿಂದ ಕೆಳಗಿಳಿಸಿದ ಸಿಬ್ಬಂದಿ:ಆಂಬ್ಯುಲೆನ್ಸ್​ನಲ್ಲಿ ಸಾಗಿಸಲು 1,500 ರೂಪಾಯಿ ಕೇಳಿದ್ದಾರೆ. ಹಣದ ವ್ಯವಸ್ಥೆ ಮಾಡುತ್ತೇವೆ ಮೊದಲು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ತಿಳಿಸಿದರೂ, ಸಿಬ್ಬಂದಿ ಮಾತ್ರ ಇದಕ್ಕೆ ನಿರ್ಲಕ್ಷ್ಯ ತೋರಿದ್ದಾರೆ. ಹಣ ನೀಡಿದರೆ ಮಾತ್ರ ಕರೆದೊಯ್ಯುವುದಾಗಿ ಹಠ ಹಿಡಿದಿದ್ದಾರೆ. ಅಲ್ಲದೇ ಅವರನ್ನು ಆಂಬ್ಯುಲೆನ್ಸ್​ನಿಂದ ಕೆಳಗಿಳಿಸಿದ್ದಾರೆ. ನೋವಿನಿಂದ ರೋಧಿಸುತ್ತಿದ್ದ ಗರ್ಭಿಣಿಯನ್ನು ಹೇಗೋ ಮಾಡಿ ಖಾಸಗಿ ಆಸ್ಪತ್ರೆಗೆ ಬಡಕುಟುಂಬ ದಾಖಲಿಸಿದೆ.

ಆದರೆ, ಆಕೆಯ ಆಯಸ್ಸು ಅಲ್ಲಿಗೆ ಮುಗಿದಿದೆ. ಆಸ್ಪತ್ರೆಗೆ ಸೇರಿಸಿದ ಕೆಲವೇ ಸಮಯದಲ್ಲಿ ಮಹಿಳೆ ಉಸಿರು ನಿಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಪ್ರಪಂಚವನ್ನು ಕಾಣಬೇಕಿದ್ದ ಕಂದಮ್ಮ ತಾಯಿಯ ಒಡಲಲ್ಲೇ ಪ್ರಾಣ ಬಿಟ್ಟಿದೆ. ವೈದ್ಯರು, ಆಸ್ಪತ್ರೆ ಮತ್ತು ಆಂಬ್ಯುಲೆನ್ಸ್​ ಸಿಬ್ಬಂದಿಯ ಹಣದ ವ್ಯಾಮೋಹಕ್ಕೆ ಎರಡು ಜೀವಗಳು ಬಲಿಯಾಗಿವೆ.

'ರಾತ್ರಿ ವೇಳೆ ಏಕಾಏಕಿ ನೋವಿನಿಂದ ನರಳುತ್ತಿದ್ದ ಗರ್ಭಿಣಿಗೆ ಚಿಕಿತ್ಸೆ ಕೊಡಿಸಲು ನಾನಾ ಕಡೆ ತಿರುಗಿದೆವು. ವೈದ್ಯರು ಹಣ ನೀಡಿದರೆ ಮಾತ್ರ ಚಿಕಿತ್ಸೆ ನೀಡುತ್ತೇವೆ ಎಂದರು. ನಮ್ಮಲ್ಲಿ ಹಣವಿರದ ಕಾರಣ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರೂ ಕೇಳದೇ, ಚಿಕಿತ್ಸೆ ನಿರಾಕರಿಸಿದರು. ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್​ ಸಿಬ್ಬಂದಿ ಕೂಡ ಸುತಾರಾಂ ಒಪ್ಪದೇ ನಮ್ಮನ್ನು ವಾಹನದಿಂದ ಕೆಳಗಿಳಿಸಿದರು. ಇಷ್ಟಾಗುವ ಹೊತ್ತಿಗೆ ಕಾಲ ಮಿಂಚಿ ಹೋಗಿ ಆಕೆ ಪ್ರಾಣ ಕಳೆದುಕೊಂಡಳು' ಎಂದು ಕುಟುಂಬಸ್ಥರು ರೋಧಿಸಿದ್ದಾರೆ.

ಹೆಣ ಸುಡಲು ಬಂತು ಹಣ:ಹಣ ಸಿಗದೇ ಪ್ರಾಣ ಬಿಟ್ಟ ಗರ್ಭಿಣಿಯನ್ನು ಸ್ವಗ್ರಾಮಕ್ಕೆ ಕರೆತಂದಾಗ ಊರಿನ ಮುಖಂಡರೊಬ್ಬರು ಆಕೆಯ ಅಂತಿಮ ವಿಧಿವಿಧಾನಕ್ಕಾಗಿ 3 ಸಾವಿರ ರೂಪಾಯಿ ನೀಡಿದ್ದಾರೆ. ಆಕೆ ಬದುಕಿದ್ದಾಗ ಇದೇ ಹಣಕ್ಕಾಗಿಯೇ ವೈದ್ಯರು ತಹತಹಿಸಿದ್ದರು. ಆಕೆಯ ಮರಣದ ನಂತರ ಚಿತೆಗಾಗಿ ವೈದ್ಯರು ಕೇಳಿದ ಹಣಕ್ಕಿಂತಲೂ ದುಪ್ಪಟ್ಟು ಮುಖಂಡರೊಬ್ಬರು ನೀಡಿದ್ದಾರೆ. ಇದು ಸಮಯಕ್ಕಾಗದ ಹಣ ಶ್ವಾನದ ಹಾಲಿಗೆ ಸಮ ಎಂಬಂತಾಯಿತು. ಮೃತ ಗರ್ಭಿಣಿಯ ಪತಿ ಕರ್ನಾಟಕದಲ್ಲಿ ಕಾರ್ಮಿಕನಾಗಿದ್ದು, ದಂಪತಿಗೆ ನಾಲ್ವರು ಮಕ್ಕಳಿದ್ದಾರೆ.

ಇದನ್ನೂ ಓದಿ:ಮಾದರಿ ನಟ ಹೀಗೆ ಮಾಡಬಹುದೇ? ಸೋನುಸೂದ್​ ರೈಲು ಪಯಣದ ವಿಡಿಯೋಗೆ ಟೀಕೆ

ABOUT THE AUTHOR

...view details