ಮಲಪ್ಪುರಂ (ಕೇರಳ) : ಕಳ್ಳತನದ ಆರೋಪದ ಮೇಲೆ ಬಿಹಾರ ಮೂಲದ ವಲಸೆ ಕಾರ್ಮಿಕನೋರ್ವನಿಗೆ ಗುಂಪೊಂದು ಥಳಿಸಿ ಹತ್ಯೆ ಮಾಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ವ್ಯಕ್ತಿಯನ್ನು ಬಿಹಾರದ ಪೂರ್ವ ಚಂಪಾರನ್ ಜಿಲ್ಲೆಯ ರಾಜೇಶ್ ಮಾಂಜಿ ಎಂದು ಗುರುತಿಸಲಾಗಿದೆ. ಈತ ಕೆಲ ದಿನಗಳ ಹಿಂದೆ ಉದ್ಯೋಗ ಅರಸಿ ಮಲಪ್ಪುರಂನ ಕೊಂಡೊಟ್ಟಿಗೆ ಆಗಮಿಸಿದ್ದ. ಆದರೆ ಮೇ 12ರಂದು ರಾತ್ರಿ 2 ಗಂಟೆ ವೇಳೆ ರಾಜೇಶ್ನನ್ನು ಸ್ಥಳೀಯರು ಕಳ್ಳನೆಂದು ಭಾವಿಸಿ ಥಳಿಸಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ತಕ್ಷಣವೇ ರಾಜೇಶ್ ಮಾಂಜಿಯನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆದ್ರೆ ಅಷ್ಟರಲ್ಲಾಗಲೇ ಆ ವ್ಯಕ್ತಿ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದರು.
ಈ ಬಗ್ಗೆ ಮಾಹಿತಿ ನೀಡಿದ ಮಲಪ್ಪುರಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಜಿತ್ ದಾಸ್, ಕಳೆದ ಮೇ 12ರಂದು ಈ ಘಟನೆ ನಡೆದಿದೆ. ಬಿಹಾರ ಮೂಲದ ವ್ಯಕ್ತಿಯೋರ್ವನನ್ನು ಕಳ್ಳನೆಂದು ಭಾವಿಸಿ ಜನರು ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ರಾಜೇಶ್ ಮಾಂಜಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ವ್ಯಕ್ತಿಯು ಗುಂಪು ಹಲ್ಲೆಗೆ ಒಳಗಾಗಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ ಎಂದು ಮಾಹಿತಿ ನೀಡಿದರು.
ಪ್ರಕರಣ ಸಂಬಂಧ 9 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದ್ದು, ವಿಚಾರಣೆ ವೇಳೆ ಆರೋಪಿಗಳು ಸುಮಾರು 2 ಗಂಟೆಗಳ ಕಾಲ ರಾಜೇಶ್ ಮಾಂಜಿಗೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಆರೋಪಿಗಳು ದರೋಡೆ ಯತ್ನದ ವೇಳೆ ರಾಜೇಶ್ ಮಾಂಜಿ ಮನೆಯ ಟೆರೇಸ್ನಿಂದ ಬಿದ್ದು ಗಾಯಗೊಂಡು ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸುಜಿತ್ ದಾಸ್ ತಿಳಿಸಿದರು.
ಇದನ್ನೂ ಓದಿ :ಜೂಜುಕೋರರ ಹಿಡಿಯಲು ಯತ್ನಿಸಿ ಎರಡನೇ ಮಹಡಿಯಿಂದ ಬಿದ್ದು ಎಸ್ಐ ಸಾವು