ಪಾಟ್ನಾ(ಬಿಹಾರ):ಭೂ ದಾಖಲೆ ಮತ್ತು ಕಂದಾಯ ಇಲಾಖೆಗಳ 149 ಅಧಿಕಾರಿಗಳ ವರ್ಗಾವಣೆ ಮತ್ತು ಹುದ್ದೆಯನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಶುಕ್ರವಾರ (ಜು.8) ರದ್ದುಗೊಳಿಸಿದ್ದಾರೆ. ಮುಖ್ಯಮಂತ್ರಿಗಳ ನಿರ್ಧಾರದ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಭೂಸುಧಾರಣೆ ಮತ್ತು ಕಂದಾಯ ಸಚಿವ ರಾಮ್ ಸೂರತ್ ರೈ, "ರಾಜಕೀಯ ಪಿತ್ರಾರ್ಜಿತ ಸ್ವತ್ತಲ್ಲ" ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಜೆಡಿ(ಯು) ಮತ್ತು ಬಿಜೆಪಿ ನಡುವಿನ ಒಳಬೇಗುದಿ ಬಹಿರಂಗವಾಗಿದೆ.
ವರ್ಗಾವಣೆ ಮತ್ತು ಹುದ್ದೆಗಳನ್ನು ರದ್ದುಪಡಿಸುವುದು ಮುಖ್ಯಮಂತ್ರಿಗಳ ಪರಮಾಧಿಕಾರ. ಅಗತ್ಯವಿದ್ದರೆ ನಾನು ಸ್ಪಷ್ಟನೆ ನೀಡುತ್ತೇನೆ. ಇದೇ ವೇಳೆ ಆರ್‌ಜೆಡಿ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, ಅವರು ವಿರೋಧ ಪಕ್ಷದಲ್ಲಿದ್ದಾರೆ. ಆದ್ದರಿಂದ ಅದರ ನಾಯಕರು ಅದನ್ನು ಟೀಕಿಸಿದರೆ ಅದು ದೊಡ್ಡ ವಿಷಯವಲ್ಲ ಎಂದಿದ್ದಾರೆ.
ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಕಳೆದುಕೊಳ್ಳುವ ಭಯವಿದೆಯೇ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರೈ, "ಈ ಕುರ್ಚಿ ಯಾರ ಪೂರ್ವಿಕರ ಆಸ್ತಿಯಲ್ಲ. ಸರ್ಕಾರಕ್ಕೆ ನಾನು ಮುಂದುವರಿಯಲು ಅರ್ಹನಲ್ಲ ಎಂದು ಭಾವಿಸಿದರೆ, ನಾನು ಮುಂದುವರಿಸಲು ಬಯಸುವುದಿಲ್ಲ. ನನಗಿಂತ ಹೆಚ್ಚು ಯೋಗ್ಯ ವ್ಯಕ್ತಿಯನ್ನು ಹುಡುಕಬಹುದು" ಎಂದು ಹೇಳಿದರು.
149 ಸಿಬ್ಬಂದಿ ವರ್ಗಾವಣೆ ರದ್ದು:ಮುಖ್ಯಮಂತ್ರಿಗಳ ಸಲಹೆಯ ಮೇರೆಗೆ ಬಿಹಾರ ರಾಜ್ಯಪಾಲ ಫಾಗು ಚೌಹಾಣ್ ಅವರು ಶುಕ್ರವಾರ ಭೂಸುಧಾರಣೆ ಮತ್ತು ಕಂದಾಯ ಇಲಾಖೆಗಳ 149 ಸಿಬ್ಬಂದಿಗಳ ವರ್ಗಾವಣೆ ಮತ್ತು ಹುದ್ದೆಯನ್ನು ರದ್ದುಗೊಳಿಸಿದ್ದಾರೆ. ನಿತೀಶ್ ಕುಮಾರ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಪ್ರತಿಪಕ್ಷ ಆರ್‌ಜೆಡಿ ಆರೋಪಿಸಿದೆ. ಪ್ರತಿ ವರ್ಷ ಜೂನ್ ಮತ್ತು ಡಿಸೆಂಬರ್ ತಿಂಗಳಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದ್ದು, 149 ಅಧಿಕಾರಿಗಳ ವರ್ಗಾವಣೆಯನ್ನು ನಿತೀಶ್ ಕುಮಾರ್ ರದ್ದುಗೊಳಿಸಿರುವುದು ಶುಕ್ರವಾರ ಸಾಬೀತಾಗಿದೆ. ವರ್ಗಾವಣೆಗೆ ಲಂಚ ಪಡೆಯುತ್ತಿರುವುದು ನಿತೀಶ್ ಕುಮಾರ್ ಸರ್ಕಾರದಲ್ಲಿ ಬಹಿರಂಗ ರಹಸ್ಯವಾಗಿದೆ ಎಂದು ಆರ್‌ಜೆಡಿ ರಾಷ್ಟ್ರೀಯ ವಕ್ತಾರ ಮೃತುಂಜಯ್ ತಿವಾರಿ ಹೇಳಿದ್ದಾರೆ. ಸಂಬಂಧಿಸಿದ ಇಲಾಖೆಗಳ ಉಸ್ತುವಾರಿ ಹೊಂದಿರುವ ರಾಮ್ ಸೂರತ್ ರೈ ಅವರ ಸಚಿವಾಲಯ ಮಾತ್ರವಲ್ಲ, ಪ್ರತಿಯೊಂದು ಸಚಿವಾಲಯದಲ್ಲಿಯೂ ಇದೇ ಪರಿಸ್ಥಿತಿ ಇದೆ ಎಂದು ತಿವಾರಿ ಆರೋಪಿಸಿದ್ದಾರೆ.