ಕೊಯಮತ್ತೂರು (ತಮಿಳುನಾಡು): ತಮಿಳುನಾಡಿನಲ್ಲಿ ಉತ್ತರ ಭಾರತದ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಸುಳ್ಳು ಮಾಹಿತಿ ಹರಡಿದ ಬಿಹಾರದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಶಾಂತ್ ಕುಮಾರ್ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತ ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತೆ ಫೇಸ್ಬುಕ್ನಲ್ಲಿ ಸುಳ್ಳು ಮಾಹಿತಿಯನ್ನು ಪೋಸ್ಟ್ ಮಾಡಿದ್ದರು ಎಂದು ತಮಿಳುನಾಡು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಉತ್ತರ ಭಾರತೀಯ ವಲಸೆ ಕಾರ್ಮಿಕರು ಭಯಪಡಬೇಕಿಲ್ಲ: ತಮಿಳುನಾಡು ರಾಜ್ಯಪಾಲರ ಭರವಸೆ
ತಮಿಳುನಾಡಿನಲ್ಲಿ ಬಿಹಾರದ ವಲಸೆ ಕಾರ್ಮಿಕರ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಸುದ್ದಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ತಿರುಪುರದಲ್ಲಿ ನೆಲೆಸಿರುವ ವಲಸೆ ಕಾರ್ಮಿಕರ ಬಗ್ಗೆ ಫೇಸ್ಬುಕ್ನಲ್ಲಿ ಸುಳ್ಳು ಮಾಹಿತಿಯನ್ನು ಹರಡಿದ್ದಕ್ಕಾಗಿ ಪ್ರಶಾಂತ್ಕುಮಾರ್ನನ್ನು ತಮಿಳುನಾಡಿನ ಪೊಲೀಸರ ತಂಡ ಬಂಧಿಸಿದೆ. ಆರೋಪಿ ಮೂಲತಃ ಬಿಹಾರದ ಮೂಲದವನಾಗಿದ್ದು, ಜಾರ್ಖಂಡ್ನ ಲತೇಹರ್ ಜಿಲ್ಲೆಯ ಹೆನೆಗರೆ ಗ್ರಾಮದಲ್ಲಿ ನೆಲೆಸಿದ್ದ. ಇದರ ಮಾಹಿತಿ ಅರಿತ ಪೊಲೀಸ ತಂಡವು ಅಲ್ಲಿಯೇ ಮೊಕ್ಕಾಂ ಹೂಡಿ ಮಾರ್ಚ್ 11ರಂದು ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದೆ.
ಜಾರ್ಖಂಡ್ನಲ್ಲಿ ಆರೋಪಿ ಪ್ರಶಾಂತ್ಕುಮಾರ್ನನ್ನು ಬಂಧಿಸಿದ ಬಳಿಕ ಲತೇಹಾರ್ನಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಲಾಗಿತ್ತು. ನಂತರ ಟ್ರಾನ್ಸಿಟ್ ವಾರಂಟ್ ಮೇಲೆ ಆರೋಪಿಯನ್ನು ತಿರುಪುರಕ್ಕೆ ಕರೆತರಲಾಗಿದೆ. ಇದೀಗ ಇಲ್ಲಿನ 3ನೇ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಪ್ರಶಾಂತ್ಕುಮಾರ್ನನ್ನು ಹಾಜರುಪಡಿಸಲಾಗಿದೆ. ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರ ತಂಡ ಮಾಹಿತಿ ನೀಡಿದೆ.
11 ಎಫ್ಐಆರ್ಗಳು ದಾಖಲು:ವಲಸೆ ಕಾರ್ಮಿಕರ ಮೇಲೆ ಹಲ್ಲೆ ಬಗ್ಗೆ ವದಂತಿ ಹಬ್ಬಿಸಿದ ಸಂಬಂಧ ಇದುವರೆಗೆ ಎಫ್ಐಆರ್ಗಳನ್ನು ಪೊಲೀಸರು ದಾಖಲಿಸಿದ್ದಾರೆ. ಪಾಟ್ನಾ ಮೂಲದ ಪತ್ರಕರ್ತ ದೈನಿಕ್ ಭಾಸ್ಕರ್ ಪತ್ರಿಕೆ ಸಂಪಾದಕ, 'ತನ್ವೀರ್ ಪೋಸ್ಟ್' ಟ್ವಿಟರ್ ಖಾತೆ ಬಳಕೆದಾರ ಮೊಹಮ್ಮದ್ ತನ್ವೀರ್, ಬಿಜೆಪಿ ವಕ್ತಾರ ಪ್ರಶಾಂತ್ ಉಮ್ರಾವ್, ಶುಭಂ ಶುಕ್ಲಾ ಎಂಬುವವರ ತಮಿಳುನಾಡು ಪೊಲೀಸರು ಕೇಸ್ಗಳನ್ನು ದಾಖಲಿಕೊಂಡಿದ್ದಾರೆ. ಈಗಾಗಲೇ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.