ಮುಜಾಫರ್ಪುರ (ಬಿಹಾರ) :ಇಲ್ಲಿನ ಮುಜಾಫರ್ಪುರದಲ್ಲಿ ವಿದ್ಯುತ್ ಇಲಾಖೆ ಸಿಬ್ಬಂದಿಯ ಕರಾಮತ್ತಿಗೆ ಕೂಲಿ ಕಾರ್ಮಿಕನೊಬ್ಬ ಬೆಚ್ಚಿ ಬಿದ್ದಿದ್ದಾರೆ. ಪ್ರತಿ ತಿಂಗಳಿನಂತೆ ಮನೆಗೆ ವಿದ್ಯುತ್ ಬಿಲ್ ಬಂದಿದೆ. ಅದರಲ್ಲಿದ್ದ ಮೊತ್ತ ಕಂಡು ಹೌಹಾರಿದ್ದಾರೆ. ಒಂದೇ ತಿಂಗಳಿಗೆ ಬಂದಿದ್ದು 1 ಕೋಟಿ 29 ಲಕ್ಷ!
ವಿಶುಂಪುರ ಚಂದ್ ಪ್ರದೇಶದ ನಿವಾಸಿ ಜಮೀರ್ ಅನ್ಸಾರಿ ಎಂಬುವರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಚಿಕ್ಕ ಮನೆಯಲ್ಲಿ ಕುಟುಂಬದ ಜೊತೆ ಇದ್ದಾರೆ. ಈಚೆಗೆ ಅವರಿಗೆ ವಿದ್ಯುತ್ ಇಲಾಖೆಯ ಸಿಬ್ಬಂದಿ ಬಂದು ಕರೆಂಟ್ ಬಿಲ್ ನೀಡಿದ್ದಾರೆ. ಅದರಲ್ಲಿ 1 ಕೋಟಿ 29 ಲಕ್ಷ 846 ರೂಪಾಯಿ ಕಟ್ಟಬೇಕು ಎಂದು ನಮೂದಿಸಲಾಗಿದೆ. ಇದನ್ನು ಕಂಡು ಬೆಚ್ಚಿದ ಅನ್ಸಾರಿ, ಈ ಕುರಿತು ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ವಿದ್ಯುತ್ ಬಿಲ್ ಬಗ್ಗೆ ಜಮೀರ್ ಅವರು ಗ್ರಾಹಕರ ವೇದಿಕೆಗೂ ದೂರು ನೀಡಿದ್ದಾರೆ. ಅಧ್ಯಕ್ಷ ಅಜಯ್ ಕುಮಾರ್ ಪಾಂಡೆ ಅವರು ಈ ಬಗ್ಗೆ ತನಿಖೆ ನಡೆಸಲು ವಿದ್ಯುತ್ ಇಲಾಖೆಯ ಪೂರ್ವ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರವಣ್ ಕುಮಾರ್ ಠಾಕೂರ್ ಅವರಿಗೆ ಸೂಚಿಸಿದ್ದಾರೆ. ಈ ಕುರಿತು ಪರಿಶೀಲಿಸಿದಾಗ ಬಿಲ್ ತಪ್ಪಾಗಿ ಬಂದಿದೆ ಎಂದು ತಿಳಿದುಬಂದಿದೆ.
ಭಾರೀ ವಿದ್ಯುತ್ ಬಿಲ್ ಕುರಿತು ಸಹಾಯಕ ಎಲೆಕ್ಟ್ರಿಕಲ್ ಇಂಜಿನಿಯರ್ ಹಾಗೂ ಜೆಇಗೆ ತನಿಖೆಗೆ ಆದೇಶಿಸಲಾಗಿದೆ. ತನಿಖೆಯಲ್ಲಿ ಅವ್ಯವಹಾರ ಬೆಳಕಿಗೆ ಬಂದಿದ್ದು, ನಂತರ 1 ಕೋಟಿ 29 ಲಕ್ಷ 846 ರೂ.ಗಳ ಬಿಲ್ಲಿನ ಬದಲಾಗಿ, 33 ಸಾವಿರದ 378 ರೂಪಾಯಿ ಇರುವ ಮತ್ತೊಂದು ಬಿಲ್ ಅನ್ನು ಜಮೀರ್ ಅವರಿಗೆ ನೀಡಲಾಗಿದೆ.