ಸಾರಣ್ (ಬಿಹಾರ):ವಿಷಪೂರಿತ ಮದ್ಯಸೇವನೆ ಮಾಡಿ, ಸಾವನ್ನಪ್ಪುವ ಪ್ರಕರಣಗಳು ಬಿಹಾರದಲ್ಲಿ ಇನ್ನೂ ನಿಂತಿಲ್ಲ. ಹಿಂದಿನ ವಾರ ಸರಣ್ ಜಿಲ್ಲೆಯ ಮರ್ಹೌರಾ ನಗರದಲ್ಲಿ ವಿಷಪೂರಿತ ಮದ್ಯಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ಇಂತಹ ದುರಂತಗಳನ್ನು ನಿಯಂತ್ರಣಕ್ಕೆ ತರಲು ಬಿಹಾರ ರಾಜ್ಯ ಸಂಪೂರ್ಣವಾಗಿ ವಿಫಲವಾಗಿದೆ. ಮೃತಪಟ್ಟ ಎಲ್ಲರ ವಿವರ ಈಟಿವಿ ಭಾರತ್ಗೆ ಸಿಕ್ಕಿದೆ. ಮರ್ಹೌರಾ ನಗರದ ಜವಾಹರ್ ಮಹತೋ, ರಾಜೇಶ್ ಶರ್ಮಾ, ಮುನ್ನಾ ಸಿಂಗ್ ಮತ್ತು ಭುಲನ್ ಮಾಂಝಿ, ಅಮ್ನೋರ್ ನಗರದ ಬನಾಯ್ ಸಿಂಗ್, ವೀರೇಂದ್ರ ಠಾಕೂರ್, ಸಂಪತ್ ಮಹತೋ, ಕೃಷ್ಣ ಮಹತೋ, ರಾಮನಾಥ್ ರೈ, ಮೊಹಮ್ಮದ್ ಇಸಾ, ಮಿಥಿಲೇಶ್ ಸಿಂಗ್ ಮತ್ತು ನಂದನ್ ಪ್ರದೇಶದ ಬ್ರಿಜ್ ಬಿಹಾರಿ ರಾಯ್, ನೌಕ್ರಾದ ಭರತ್ ರಾಯ್, ಸಿವಾನ್‌ನ ಅನಿಲ್ ಮಿಸ್ತ್ರಿ, ಸುತಿಹಾರ್‌ನ ಸುಖಲ್ ಮಹತೋ ಮತ್ತು ನಾವಡಾದ ಧನೇಜರ್ ರೈ ಮೃತಪಟ್ಟವರಾಗಿದ್ದಾರೆ.
ಮದ್ಯ ಸೇವೆ ಮತ್ತು ಮಾರಾಟವನ್ನು ಬಿಹಾರ ಸರ್ಕಾರವು ಸಂಪೂರ್ಣವಾಗಿ ನಿಷೇಧ ಮಾಡಿರುವ ಕಾರಣದಿಂದ ಇಂತಹ ಅವಘಡಗಳು ಸಂಭವಿಸುತ್ತಿವೆ ಎಂದು ಹೇಳಲಾಗುತ್ತಿದ್ದು, ಕೆಮ್ಮಿಗೆ ಬಳಸುವ ಸಿರಪ್ನಲ್ಲಿ ಅಕ್ರಮ ಮದ್ಯ ಬೆರೆಸುವ ಮಟ್ಟಿಗೆ ನಕಲಿ ಮದ್ಯ ಜಾಲ ಹರಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಮೃತಪಟ್ಟಿದ್ದು ಚಳಿಯಿಂದಲೇ?:ಅಕ್ರಮ ಮದ್ಯಸೇವನೆಯಿಂದ ವ್ಯಕ್ತಿಗಳು ಮೃತರಾಗುತ್ತಿದ್ದಾರೆ ಬಹುತೇಕ ಎಲ್ಲೆಡೆಯಿಂದಲೂ ವರದಿಯಾಗಿದೆ. ಗುರುವಾರವಷ್ಟೆ ಸುದ್ದಿಗೋಷ್ಠಿ ಕರೆದಿದ್ದ ಸಾರಣ್ ಜಿಲ್ಲಾಧಿಕಾರಿ ರಾಜೇಶ್ ಮೀನಾ, ಅಕ್ರಮ ಮದ್ಯವೇ ಸಾವಿಗೆ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಮೃತಪಟ್ಟಿರುವವರ ಮನೆಯಲ್ಲಿ ವಿಷಪೂರಿತ ಮದ್ಯದ ಬಾಟಲಿಗಳು ದೊರೆತರೂ, ಅವರು ಮದ್ಯದಿಂದಲೇ ಮೃತಪಟ್ಟಿದ್ದಾರೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದರು.