ಕರ್ನಾಟಕ

karnataka

ETV Bharat / bharat

"ಮೈತ್ರಿ" ಬಿಟ್ಟು "ಮಹಾಮೈತ್ರಿ" ಸರ್ಕಾರಕ್ಕೆ ಜೆಡಿಯು ಪ್ಲಾನ್​.. ಇಂದು ಬಿಹಾರ ಸರ್ಕಾರದ ಭವಿಷ್ಯ ನಿರ್ಧಾರ - Bihar government future decision today

ರಾಜಕೀಯ ಅಸ್ಥಿರತೆ ಈಗ ಬಿಹಾರಕ್ಕೆ ಕಾಲಿಟ್ಟಿದೆ. ಬಿಜೆಪಿ ಮತ್ತು ಜೆಡಿಯು ಮೈತ್ರಿ ಸರ್ಕಾರ ಪತನವಾಗುವ ಸಾಧ್ಯತೆ ಇದೆ. ಉಭಯ ಪಕ್ಷಗಳ ನಡುವಿನ ತಿಕ್ಕಾಟ ತೀವ್ರವಾಗಿದ್ದು, ಇಂದಿನ ಶಾಸಕರ ಸಭೆಯಲ್ಲಿ ಸರ್ಕಾರದ ಭವಿಷ್ಯ ಹೊರ ಬೀಳಲಿದೆ.

Etv Bharat
ಇಂದು ಬಿಹಾರ ಸರ್ಕಾರದ ಭವಿಷ್ಯ ನಿರ್ಧಾರ

By

Published : Aug 9, 2022, 12:16 PM IST

Updated : Aug 9, 2022, 12:40 PM IST

ಪಾಟ್ನಾ:ಬಿಹಾರದಲ್ಲಿ ರಾಜಕೀಯ ಪಲ್ಲಟಗಳು ಶುರುವಾಗಿವೆ. ಮೈತ್ರಿ ಪಕ್ಷ ಬಿಜೆಪಿ ಜೊತೆ ಮುನಿಸಿಕೊಂಡಿರುವ ಸಂಯುಕ್ತ ಜನತಾದಳ (ಜೆಡಿಯು) ವಿಪಕ್ಷಗಳ ಜೊತೆ ಮಹಾಘಟಬಂಧನ್ ​(ಮಹಾಮೈತ್ರಿಕೂಟ) ಸರ್ಕಾರ ರಚನೆ ಮಾಡುವ ಚಿಂತನೆ ನಡೆಸಿದೆ ಎಂಬ ಗುಸುಗುಸು ಕೇಳಿ ಬಂದಿದೆ.

ಮುಖ್ಯಮಂತ್ರಿ ನಿತೀಶ್​ ಕುಮಾರ್ ನೇತೃತ್ವದಲ್ಲಿ​ನಡೆಯುತ್ತಿರುವ ಶಾಸಕರ ಸಭೆಯಲ್ಲಿ ಸರ್ಕಾರದ ಹಣೆಬರಹ ನಿರ್ಧಾರವಾಗುವ ಸಾಧ್ಯತೆ ಇದೆ. ಇತ್ತೀಚೆಗೆ ನಡೆದ ಪ್ರಧಾನಿ ಜೊತೆ ಮುಖ್ಯಮಂತ್ರಿಗಳ ಸಭೆಯಲ್ಲಿ ನಿತೀಶ್​ ಕುಮಾರ್​ ಗೈರಾಗಿದ್ದು, ಬಿಜೆಪಿ ಜೊತೆ ದೂರ ಉಳಿಯಲು ಮುಂದಾಗಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ರಾಜ್ಯಪಾಲರ ಭೇಟಿಗೆ ಅವಕಾಶ ಕೋರಿದ ನಿತೀಶ್​ ಕುಮಾರ್​:ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ರಾಜ್ಯಪಾಲ ಫಾಗು ಚೌಹಾಣ್ ಅವರ ಭೇಟಿಗೆ ಕಾಲಾವಕಾಶ ಕೋರಿದ್ದಾರೆ ಎಂದು ತಿಳಿದು ಬಂದಿದೆ.

ಆರ್‌ಸಿಪಿ ಸಿಂಗ್ ಜೆಡಿಯುಗೆ ಶನಿವಾರ ರಾಜೀನಾಮೆ ನೀಡಿದ ನಂತರ ಪಾಟ್ನಾದಲ್ಲಿ ಸಿಎಂ ನಿತೀಶ್​ ಕುಮಾರ್ ನಿವಾಸದಲ್ಲಿ ಜೆಡಿಯು ಶಾಸಕರು ಮತ್ತು ಸಂಸದರ ಸಭೆ ನಡೆಯಿತು. ಈ ನಡುವೆ, ಪ್ರತಿಪಕ್ಷ ಆರ್‌ಜೆಡಿ ಕೂಡಾ ಇಂದು ಮಹತ್ವದ ಸಭೆ ನಡೆಸಿತು. ಕಾಂಗ್ರೆಸ್ ಮತ್ತು ಎಡಪಕ್ಷಗಳ ನಾಯಕರು ಮತ್ತು ಶಾಸಕರು ರಾಬ್ರಿ ದೇವಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು.

ಆರ್​ಜೆಡಿ ಹಾಗೂ ಮಿತ್ರಪಕ್ಷಗಳು ಒಂದೆಡೆ ಸಭೆ ನಡೆಸಿದರೆ, ಬಿಜೆಪಿ ಮಹತ್ವದ ಸಭೆ ನಡೆಸಿತು. ಉಪಮುಖ್ಯಮಂತ್ರಿ ತಾರ್ಕಿಶೋರ್ ಪ್ರಸಾದ್ ಅವರ ನಿವಾಸದಲ್ಲಿ ಬಿಜೆಪಿ ತನ್ನ ಪ್ರಮುಖ ನಾಯಕರ ಸಭೆ ನಡೆಸಿದೆ. ಸಭೆಯಲ್ಲಿ ಮುಂದಿನ ಕಾರ್ಯತಂತ್ರ ಕುರಿತು ಚರ್ಚೆ ನಡೆಸಲಾಗಿದೆ ಎಂದು ಮೂಲಗಳಿಂದ ಮಾಹಿತಿ ಹೊರ ಬಿದ್ದಿದೆ.

ಆರ್​ಜೆಡಿ ಬೆಂಬಲ ಘೋಷಣೆ:ಈ ಮಧ್ಯೆಯೇ ಲಾಲು ಪ್ರಸಾದ್​ ಯಾದವ್​ ಅವರ ಆರ್​ಜೆಡಿ ಜೆಡಿಯು ಸರ್ಕಾರಕ್ಕೆ ಬೆಂಬಲ ನೀಡಲು ಸಿದ್ಧ ಎಂದು ಹೇಳಿಕೆ ನೀಡಿದೆ. ಆರ್‌ಜೆಡಿ ರಾಷ್ಟ್ರೀಯ ಉಪಾಧ್ಯಕ್ಷ ಶಿವಾನಂದ್ ತಿವಾರಿ ಮಾತನಾಡಿ, ಜೆಡಿಯು ಮತ್ತು ಬಿಜೆಪಿ ಮಧ್ಯೆ ಭಿನ್ನಮತ ಸ್ಫೋಟಗೊಂಡಿದೆ.

ಸಿಎಂ ಶಾಸಕರ ಸಭೆ ನಡೆಸುತ್ತಿರುವುದು ಪರಿಸ್ಥಿತಿ ಕೈಮೀರಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಒಂದು ವೇಳೆ ಜೆಡಿಯುಗೆ ತಮ್ಮ ಬೆಂಬಲ ಬೇಕಿನ್ನೆಸಿದಲ್ಲಿ ಅದಕ್ಕೆ ನಾವು ಸಿದ್ಧ ಎಂದು ಹೇಳಿದ್ದಾರೆ. ಇದರಿಂದ ಇಂದು ನಡೆಯುವ ಶಾಸಕರ ಸಭೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡು "ಮಹಾಮೈತ್ರಿ" ಸರ್ಕಾರವನ್ನು ರಚಿಸಬೇಕೆ ಎಂಬ ಕುರಿತು ಚರ್ಚೆ ನಡೆಯಲಿದೆ. ಬಿಜೆಪಿ ಕೂಡ ಜೆಡಿಯು ಜೊತೆಗೆ ತೀವ್ರ ತಿಕ್ಕಾಟ ನಡೆಸುತ್ತಿದ್ದು, ಸರ್ಕಾರ ಉಳಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಆರ್​ಜೆಡಿ ಮೇಲೆ ತೂಗುಗತ್ತಿ:ಇನ್ನೊಂದೆಡೆ ಬಿಹಾರದ ವಿಧಾನಸಭೆ ಸ್ಪೀಕರ್ ಆದ ಬಿಜೆಪಿಯ ವಿಜಯ್ ಸಿನ್ಹಾ ಅವರು ಪೊಲೀಸ್ ಮಸೂದೆ ಕುರಿತು ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿದ್ದಕ್ಕಾಗಿ 18 ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಇದು ಆರ್​ಜೆಡಿ ಪಕ್ಷದಲ್ಲಿ ಆತಂಕ ಉಂಟು ಮಾಡಿದೆ. ಆರ್‌ಜೆಡಿ ಶಾಸಕರ ಸದಸ್ಯತ್ವ ರದ್ದಾಗುವ ಸಾಧ್ಯತೆ ಇದೆ.

ಸ್ಪೀಕರ್ ವಿಜಯ್ ಸಿನ್ಹಾ ಅವರು ರಾಮನಾರಾಯಣ ಮಂಡಲ್ ಅವರ ಅಧ್ಯಕ್ಷತೆಯಲ್ಲಿ ಶಿಸ್ತು ಸಮಿತಿ ಸಭೆ ಕರೆದಿದ್ದು, ಬಿಹಾರದಲ್ಲಿ ನಡೆಯುತ್ತಿರುವ ರಾಜಕೀಯ ತಂತ್ರವನ್ನು ವಿಫಲಗೊಳಿಸಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

18 ಆರ್‌ಜೆಡಿ ಶಾಸಕರ ಸದಸ್ಯತ್ವವನ್ನು ರದ್ದು ಮಾಡಿದಲ್ಲಿ ಜೆಡಿಯುಗೆ ಹೊಸ ಸಂಕಷ್ಟವನ್ನು ತಂದೊಡ್ಡಲು ರಣತಂತ್ರ ಹೂಡಲಾಗುತ್ತಿದೆ. ಏತನ್ಮಧ್ಯೆ, ಎಡಪಕ್ಷಗಳು, ಆರ್‌ಜೆಡಿ ಮತ್ತು ಕಾಂಗ್ರೆಸ್ ಸೇರಿಕೊಂಡು ಜೆಡಿಯು ಜೊತೆಗೆ ಸರ್ಕಾರ ರಚನೆ ಮಾಡುವ ಬಗ್ಗೆಯೂ ಮಾತುಕತೆಗಳು ನಡೆಯುತ್ತಿವೆ.

ಓದಿ:ಮಾಜಿ ಲೋಕಾಯುಕ್ತ ಭಾಸ್ಕರ್ ರಾವ್ ಲಂಚ ಪಡೆದ‌ ಪ್ರಕರಣ: ಮಹತ್ವದ ಘಟ್ಟ ತಲುಪಿದ ಕೋರ್ಟ್ ವಿಚಾರಣೆ

Last Updated : Aug 9, 2022, 12:40 PM IST

ABOUT THE AUTHOR

...view details