ಪಾಟ್ನಾ (ಬಿಹಾರ) :ರಾಜಕೀಯ ರಣತಂತ್ರಕ್ಕೆ ಅಗತ್ಯ ಅಸ್ತ್ರವಾಗಿರುವ ಜಾತಿಗಣತಿಯನ್ನು ದೇಶಾದ್ಯಂತ ನಡೆಸಬೇಕು ಎಂಬ ಕೂಗು ಕೇಳಿಬರುತ್ತಿರುವ ನಡುವೆಯೇ ಬಿಹಾರದಲ್ಲಿ ಜಾತಿ ಸಮೀಕ್ಷಾ ವರದಿಯನ್ನು ಮುಖ್ಯಮಂತ್ರಿ ನಿತೀಶ್ಕುಮಾರ್ ನೇತೃತ್ವದ ಮೈತ್ರಿ ಸರ್ಕಾರ ಸೋಮವಾರ ಪ್ರಕಟಿಸಿದೆ. ರಾಜ್ಯದಲ್ಲಿ ಶೇಕಡಾ 63 ಪ್ರತಿಶತ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ವರ್ಗಗಳು ಇದ್ದಾರೆ ಎಂದು ಅಂಕಿಅಂಶಗಳು ಹೇಳಿವೆ.
ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಅತ್ಯಂತ ಹಿಂದುಳಿದ ವರ್ಗದವರಿದ್ದಾರೆ. ಅವರ ಸಂಖ್ಯೆ ಶೇಕಡಾ 36.01 ರಷ್ಟಿದೆ. ಹಿಂದುಳಿದ ವರ್ಗದವರು ಶೇಕಡಾ 27.12 ರಷ್ಟಿದ್ದಾರೆ. ಈ ಎರಡು ಸಮುದಾಯಗಳ ಒಟ್ಟು ಪ್ರಮಾಣ 63 ಪ್ರತಿಶತದಷ್ಟಿದೆ. ಕುರ್ಮಿಗಳು 2.87 ಪ್ರತಿಶತದಷ್ಟಿದ್ದು, ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಜಾತಿ ಗಣತಿಯನ್ನು ಕೇಂದ್ರ ಸರ್ಕಾರವೇ ನಡೆಸಬೇಕು ಎಂಬ ವಾದವನ್ನು ತಳ್ಳಿಹಾಕಿದ ಸುಪ್ರೀಂಕೋರ್ಟ್, ಯಾವುದೇ ರಾಜ್ಯಗಳ ಸಾಂವಿಧಾನಿಕ ಅಧಿಕಾರವನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ ಬೆನ್ನಲ್ಲೇ, ಬಿಹಾರ ಸರ್ಕಾರ ತಾನು ನಡೆಸಿದ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆದಿದೆ.
ರಾಜ್ಯದ ಆಡಳಿತಾರೂಢ ರಾಷ್ಟ್ರೀಯ ಜನತಾ ದಳ (ಯುನೈಟೆಡ್) ಕಳೆದ ವರ್ಷ ಜಾತಿ ಸಮೀಕ್ಷೆ ನಡೆಸುವ ಪ್ರಸ್ತಾಪ ಮುಂದಿಟ್ಟಿತ್ತು. ಪ್ರಸ್ತುತ ಇರುವ ಮೀಸಲು ಕೋಟಾಗಳು ಹಿಂದುಳಿದ ವರ್ಗಗಳ ಈಗಿನ ಜನಸಂಖ್ಯೆಗೆ ಅನುಗುಣವಾಗಿಲ್ಲ ಎಂಬ ಕಾರಣ ನೀಡಿತ್ತು. ಈ ಕಾರಣಕ್ಕಾಗಿ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಮೀಸಲಾತಿಯನ್ನು ನೀಡುವ ಸಲುವಾಗಿ ಜಾತಿ ಗಣತಿ ನಡೆಸಲು ಮುಂದಾಗಿತ್ತು. ಇದರ ಜೊತೆಗೆ 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಟಕ್ಕರ್ ನೀಡುವ ಉದ್ದೇಶವೂ ಇದರಲ್ಲಿತ್ತು.