ಕರ್ನಾಟಕ

karnataka

ETV Bharat / bharat

ಎಕ್ಸ್‌ಪ್ರೆಸ್​ ರೈಲಿನಲ್ಲಿ ಸಾಗಿಸುತ್ತಿದ್ದ ಚೀಲಗಳಲ್ಲಿ ಸ್ಫೋಟಕಗಳು ಪತ್ತೆ: ಬೆಚ್ಚಿಬಿದ್ದ ಪ್ರಯಾಣಿಕರು

ಬಿಹಾರದ ಸಿವಾನ್ ಜಂಕ್ಷನ್ ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್​ ರೈಲಿನಲ್ಲಿ ಸಾಗಿಸುತ್ತಿದ್ದ ಚೀಲಗಳಲ್ಲಿ ಸ್ಫೋಟಕಗಳು ಪತ್ತೆಯಾಗಿ ಆಂತಕ ಸೃಷ್ಟಿಸಿದ್ದ ಘಟನೆ ಜರುಗಿದೆ.

bihar-explosives-recovered-from-train-at-siwan-railway-junction
ಎಕ್ಸ್‌ಪ್ರೆಸ್​ ರೈಲಿನಲ್ಲಿ ಸಾಗಿಸುತ್ತಿದ್ದ ಚೀಲಗಳಲ್ಲಿ ಸ್ಫೋಟಕಗಳು ಪತ್ತೆ: ಬೆಚ್ಚಿ ಬಿದ್ದ ಪ್ರಯಾಣಿಕರು

By

Published : Mar 23, 2023, 6:40 PM IST

ಸಿವಾನ್ (ಬಿಹಾರ):ಗ್ವಾಲಿಯರ್ - ಬರೌನಿ ಎಕ್ಸ್‌ಪ್ರೆಸ್​ ರೈಲಿನ ಪ್ಯಾಸೆಂಜರ್ ಕೋಚ್‌ನಲ್ಲಿ ಸ್ಫೋಟಕಗಳು ಪತ್ತೆಯಾಗಿರುವ ಘಟನೆ ಬಿಹಾರದ ಸಿವಾನ್ ಜಂಕ್ಷನ್ ರೈಲು ನಿಲ್ದಾಣದಲ್ಲಿ ನಡೆದಿದೆ. ಸರ್ಕಾರಿ ರೈಲ್ವೆ ಪೊಲೀಸ್​ (ಜಿಆರ್​ಪಿ) ಸಿಬ್ಬಂದಿ ಸಿವಾನ್ ಜಂಕ್ಷನ್​ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಚೀಲಗಳಲ್ಲಿ ಸ್ಫೋಟಕಗಳು ಪತ್ತೆಯಾಗಿವೆ. ಇದರಿಂದ ರೈಲು ನಿಲ್ದಾಣದಲ್ಲಿದ್ದ ಪ್ರಯಾಣಿಕರು ಆತಂಕಕ್ಕೆ ಒಳಗಾಗುವಂತೆ ಮಾಡಿತ್ತು.

ಇದನ್ನೂ ಓದಿ:ಹಣ್ಣು ಮಾರಾಟಗಾರನ ಬಳಿ ಎಂಟು ಜೀವಂತ ಬಾಂಬ್​ಗಳು ಪತ್ತೆ.. ಬೆಚ್ಚಿ ಬಿದ್ದ ಜನ

ಸಿವಾನ್​ ಜಂಕ್ಷನ್​ಗೆ ಆಗಮಿಸಿದ ಗ್ವಾಲಿಯರ್ - ಬರೌನಿ ಎಕ್ಸ್‌ಪ್ರೆಸ್ ರೈಲಿನ ಪ್ಯಾಸೆಂಜರ್ ಬೋಗಿಯಲ್ಲಿ ಸಾಗಿಸುತ್ತಿದ್ದ ಹಲವು ಶಂಕಿತ ಬ್ಯಾಗ್​ಗಳನ್ನು ಪೊಲೀಸರು ಗಮನಿಸಿದ್ದಾರೆ. ಅವುಗಳನ್ನು ತಪಾಸಣೆ ನಡೆಸಿದಾಗ ಸ್ಫೋಟಕಗಳು ಪತ್ತೆಯಾಗಿವೆ. ಅಂತೆಯೇ, ಪೊಲೀಸರು ತಕ್ಷಣ ರೈಲ್ವೆಯ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಕಚೇರಿಗೆ ಮಾಹಿತಿ ನೀಡಿದ್ದಾರೆ. ಎಡಿಜಿ ಕಚೇರಿಯ ಸೂಚನೆಯ ಮೇರೆಗೆ ಪಾಟ್ನಾದಿಂದ ಬಾಂಬ್ ನಿಷ್ಕ್ರಿಯ ದಳದ ತಂಡವು ಸಿವಾನ್ ರೈಲ್ವೆ ಜಂಕ್ಷನ್‌ಗೆ ದೌಡಾಯಿಸಿದೆ.

ಇದೇ ವೇಳೆ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ರೈಲು ನಿಲ್ದಾಣದಲ್ಲಿ ಜನರು ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸಂಪೂರ್ಣವಾಗಿ ಖಾಲಿ ಮಾಡಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳದ ತಂಡವು ಪಾಟ್ನಾದಿಂದ ಆಗಮಿಸಿ ಸ್ಫೋಟಕಗಳಿರುವ ಚೀಲಗಳನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಿದೆ. ಈ ಬಗ್ಗೆ ಜಿಆರ್‌ಪಿ ಪೊಲೀಸ್ ಠಾಣೆಯ ಉಸ್ತುವಾರಿ ಸುಧೀರ್ ಸಿಂಗ್ ಪ್ರತಿಕ್ರಿಯಿಸಿದ್ದು, ರೈಲಿನಲ್ಲಿ ಸ್ಫೋಟಕಗಳು ಪತ್ತೆಯಾದ ಕುರಿತು ಬಾಂಬ್ ನಿಷ್ಕ್ರಿಯ ದಳವು ತನಿಖೆ ನಡೆಸುತ್ತಿದೆ. ಈ ಚೀಲಗಳಲ್ಲಿ ಇರುವುದು ಬಾಂಬ್ ಅಥವಾ ಅಪಾಯಕಾರಿ ಸ್ಫೋಟಕ ವಸ್ತುವೋ ಎಂಬ ಬಗ್ಗೆ ತನಿಖೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಬಿಹಾರದಲ್ಲಿ ಸ್ಫೋಟಕಗಳ ಪತ್ತೆ ಇದೇ ಮೊದಲಲ್ಲ:ಬಿಹಾರದಲ್ಲಿ ಸ್ಫೋಟಕಗಳು ಪತ್ತೆಯಾಗಿರುವುದು ಇದೇ ಮೊದಲಲ್ಲ. ಜನವರಿಯಲ್ಲಿ ವೈಶಾಲಿ ಜಿಲ್ಲೆಯಲ್ಲಿ ಹಣ್ಣು ಮಾರಾಟಗಾರನೋರ್ವನ ಬಳಿ ಎಂಟು ಜೀವಂತ ಬಾಂಬ್​ಗಳು ಪತ್ತೆಯಾಗಿದ್ದವು. ಫೆಬ್ರವರಿ ತಿಂಗಳ ಆರಂಭದಲ್ಲೂ ಮುಜಾಫರ್‌ಪುರ ಜಿಲ್ಲೆಯಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದವು. ಪೊಲೀಸ್ ತಂಡವು ತೀನ್ ಕೋಥಿಯಾದಲ್ಲಿ ದಾಳಿ ನಡೆಸಿದಾಗ ಮೂರು ಬಾಂಬ್ ಸಾಧನಗಳು ಮತ್ತು ಐದು ಖಾಲಿ ಕಾಟ್ರಿಡ್ಜ್‌ಗಳು, ನಾಲ್ಕು ಸೆಲ್ ಫೋನ್‌ಗಳು ಮತ್ತು 400 ಗ್ರಾಂ ನಿಷಿದ್ಧ ವಸ್ತುಗಳು ದೊರೆತಿದ್ದವು.

ಅಷ್ಟೇ ಅಲ್ಲ, ಈ ಹಿಂದೆ ಬಿಹಾರದಲ್ಲಿ ಹಲವು ಬಾರಿ ರೈಲಿನ ಮೂಲಕವೂ ಸ್ಫೋಟಕಗಳನ್ನು ಸಾಗಿಸಿದ ಪ್ರಕರಣಗಳು ವರದಿಯಾಗಿದೆ. ಅದರಲ್ಲೂ, ರೈಲಿನಲ್ಲಿ ಬಿಹಾರಕ್ಕೆ ಸ್ಫೋಟಕಗಳನ್ನು ತರುವುದು ಅತ್ಯಂತ ಸುಲಭ ಮತ್ತು ಸುಲಭ ಎಂಬ ಅಂಶವೂ ಈ ಹಿಂದೆ ಹೊರಬಿದ್ದಿದೆ. 2013ರಲ್ಲಿ ನರೇಂದ್ರ ಮೋದಿ ಪಾಟ್ನಾದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆ ಸಂದರ್ಭದಲ್ಲಿ ಬಾಂಬ್​ ಸ್ಫೋಟ ಸಂಭವಿಸಿತ್ತು. ಈ ಕೃತ್ಯಕ್ಕೆ ಬಳಸಿದ ಸ್ಫೋಟಕಗಳನ್ನು ರೈಲಿನ ಮೂಲಕವೇ ತರಲಾಗಿತ್ತು. 2017ರಲ್ಲಿ ಕತಿಹಾರ್ - ಮಾಲ್ಡಾ ಪ್ಯಾಸೆಂಜರ್ ರೈಲಿನಲ್ಲಿ ಜೀವಂತ ಬಾಂಬ್​ಗಳು ಪತ್ತೆಯಾಗಿದ್ದವು. ಇದಲ್ಲದೇ, ರೈಲುಗಳಲ್ಲಿ ಶಸ್ತ್ರಾಸ್ತ್ರ ಮತ್ತು ಬಾಂಬ್‌ಗಳನ್ನು ಬಳಸಿ ಲೂಟಿ ಮಾಡಿದ ಹತ್ತಾರು ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.

ಇದನ್ನೂ ಓದಿ:ಮನೆಯಲ್ಲಿದ್ದ 288 ಕಚ್ಚಾ ಬಾಂಬ್ ವಶಕ್ಕೆ​.. ಯುವತಿ ಅರೆಸ್ಟ್​, ಯುಪಿಯಲ್ಲಿ ತಪ್ಪಿತು ಭಾರಿ ದುರಂತ

ABOUT THE AUTHOR

...view details