ನವದೆಹಲಿ :ಬಿಹಾರದ 3ನೇ ಹಂತದ ಚುನಾವಣಾ ಕಣದಲ್ಲಿ ಶೇ.31ರಷ್ಟು ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿರುವವರು ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಮಾಡಿದೆ. ಒಟ್ಟು 1,204 ಅಭ್ಯರ್ಥಿಗಳು ಕಣದಲ್ಲಿದ್ದು, ನವಂಬರ್ 7ರಂದು 3ನೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ.
ಒಟ್ಟು 1,204 ಅಭ್ಯರ್ಥಿಗಳ 1,195 ಮಂದಿಯ ನಾಮಪತ್ರದ ಉಲ್ಲೇಖದ ಪ್ರಕಾರ ಎಡಿಆರ್ ವರದಿ ನೀಡಿದ್ದು, ಅದರಲ್ಲಿ ಸುಮಾರು 371 ಅಭ್ಯರ್ಥಿಗಳ ಮೇಲೆ ಅಪರಾಧ ಪ್ರಕರಣಗಳು ದಾಖಲಾಗಿವೆ. 3ನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಆರ್ಜೆಡಿಯ ಒಟ್ಟು 44 ಅಭ್ಯರ್ಥಿಗಳ ಪೈಕಿ 32 ಅಭ್ಯರ್ಥಿಗಳು ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ.
ಬಿಜೆಪಿಯ ಒಟ್ಟು 34 ಮಂದಿ ಅಭ್ಯರ್ಥಿಗಳ ಪೈಕಿ 26 ಅಭ್ಯರ್ಥಿಗಳು, ಕಾಂಗ್ರೆಸ್ನ 25 ರಲ್ಲಿ 19 ಅಭ್ಯರ್ಥಿಗಳು, ಎಲ್ಜೆಪಿಯ 42 ಅಭ್ಯರ್ಥಿಗಳಲ್ಲಿ 18 ಮಂದಿ, ಜೆಡಿಯುನ 37 ಮಂದಿಯಲ್ಲಿ 21 ಅಭ್ಯರ್ಥಿಗಳು, ಬಿಎಸ್ಪಿಯ 9ರಲ್ಲಿ 5 ಅಭ್ಯರ್ಥಿಗಳು ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ. ಇದರಲ್ಲಿ ಶೇ.24ರಷ್ಟು ಅಭ್ಯರ್ಥಿಗಳು ಅತ್ಯಾಚಾರ, ಕೊಲೆ, ಅಪಹರಣದಂತಹ ಗಂಭೀರ ಸ್ವರೂಪದ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.