ಪಾಟ್ನಾ(ಬಿಹಾರ):ವಿದ್ಯಾರ್ಥಿಗಳ ಪ್ರಾಥಮಿಕ ಶಿಕ್ಷಣಕ್ಕಾಗಿ ಸರ್ಕಾರಗಳು ಕೋಟ್ಯಂತರ ರೂಪಾಯಿ ಅನುದಾನ ಮೀಸಲು ಇಡುತ್ತವೆ. ಆದರೆ, ಕೆಲವೊಂದು ರಾಜ್ಯಗಳಲ್ಲಿ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಹೆಚ್ಚಾಗಿದೆ. ಅಂತಹ ಶಾಲೆಯೊಂದು ಬಿಹಾರದಲ್ಲಿ ಇದೆ. ಒಂದೇ ಕೊಠಡಿಯಲ್ಲಿ 8 ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗ್ತಿದೆ.
ಬಿಹಾರದ ಮಸೌರಿಯಲ್ಲಿರುವ ಶಾಲೆಯ ಸ್ಥಿತಿ ಇದು. ಇಲ್ಲಿ 1ರಿಂದ 8ನೇ ತರಗತಿವರೆಗೆ ವಿದ್ಯಾರ್ಥಿಗಳಿದ್ದಾರೆ. ಆದರೆ, ಎಲ್ಲರಿಗೂ ಒಂದೇ ಕೊಠಡಿಯಲ್ಲಿ ಪಾಠ ಮಾಡಲಾಗ್ತಿದೆ . ಒಟ್ಟು 142 ವಿದ್ಯಾರ್ಥಿಗಳಿಗೆ ಒಂದೇ ಬ್ಲಾಕ್ ಬೋರ್ಡ್ನಲ್ಲಿ ಐವರು ಶಿಕ್ಷಕರು ಬೋಧನೆ ಮಾಡುತ್ತಾರೆ. ಎಂಟು ತರಗತಿ ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಪಾಠ ನಡೆಯುವುದರಿಂದ ಅನೇಕ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಶಿಕ್ಷಕರೂ ಸಹ ತೊಂದರೆಗೊಳಗಾಗಿದ್ದಾರೆ.
ಈ ಶಾಲೆಯಲ್ಲಿ ಒಟ್ಟು 5 ಕೊಠಡಿಗಳಿವೆ. ಆದರೆ, ಎಲ್ಲವೂ ಶಿಥಿಲಾವಸ್ಥೆಯಲ್ಲಿವೆ. ಒಂದು ಕೊಠಡಿ ಮಾತ್ರ ಉತ್ತಮ ಸ್ಥಿತಿಯಲ್ಲಿರುವ ಕಾರಣ ಪಾಠ ಮಾಡಲಾಗ್ತಿದೆ. ಈ ಶಾಲೆಯಲ್ಲಿ ಒಟ್ಟು 142 ವಿದ್ಯಾರ್ಥಿಗಳ ದಾಖಲಾತಿ ಇದೆ. ಒಂದೇ ಕೋಣೆ ಇರುವ ಕಾರಣ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಗೈರಾಗುತ್ತಾರೆ. ಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಒಟ್ಟಿಗೆ ಕುಳಿತು ವ್ಯಾಸಂಗ ಮಾಡಲು ಕಷ್ಟವಾಗ್ತಿದೆ ಎಂದು ಹೇಳ್ತಿದ್ದಾರೆ.