ಪಾಟ್ನಾ (ಬಿಹಾರ): ಸಾಲ ಮರುಪಾವತಿಸುವ ವಿಚಾರಕ್ಕೆ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ, ಅಮಾನುಷವಾಗಿ ಹಲ್ಲೆ ನಡೆಸಿ ಮೂತ್ರ ಕುಡಿಸಿರುವ ಅಮಾನವೀಯ ಘಟನೆ ಪಾಟ್ನಾದಲ್ಲಿ ಶನಿವಾರ ನಡೆದಿದೆ. ಸಂತ್ರಸ್ತೆಯನ್ನು ಆಕೆಯ ಗ್ರಾಮದ ಆರು ಮಂದಿ ದುಷ್ಕರ್ಮಿಗಳು ವಿವಸ್ತ್ರಗೊಳಿಸಿ ಥಳಿಸಿದ್ದಾರೆ. ಬಳಿಕ ಬಾಯಿಯಲ್ಲಿ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದಾರೆ. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಟ್ನಾದ ಖುಸ್ರುಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಕರಣದ ಸಂಪೂರ್ಣ ವಿವರ:"ದಲಿತ ಮಹಿಳೆಯು ಆರೋಪಿಗಳಿಂದ 1,500 ರೂ. ಸಾಲ ಪಡೆದಿದ್ದರಂತೆ. ಕೆಲವು ತಿಂಗಳ ಬಳಿಕ ಬಡ್ಡಿಸಮೇತ ಸಾಲವನ್ನು ಮರುಪಾವತಿಸಿದ್ದರು. ಆದರೆ ಸಾಲ ವಾಪಸ್ ನೀಡಿದ ಬಳಿಕವೂ ಆರೋಪಿಗಳಾದ ಪ್ರಮೋದ್ ಸಿಂಗ್ ಹಾಗೂ ಅವರ ಮಗ ಅಂಶು ಮಹಿಳೆಗೆ ಮತ್ತೆ ಕಿರುಕುಳ ನೀಡಿದ್ದರು. ಇನ್ನೂ ಹೆಚ್ಚಿನ ಹಣ ನೀಡುವಂತೆ ಪೀಡಿಸುತ್ತಿದ್ದರು. ಇದಕ್ಕೆ ಮಹಿಳೆ ನಿರಾಕರಿಸಿದ್ದರು. ಹಣ ನೀಡದಿದ್ದರೆ ವಿವಸ್ತ್ರಗೊಳಿಸಿ ಊರಿನಲ್ಲಿ ಮೆರವಣಿಗೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು" ಎಂದು ಸಂತ್ರಸ್ತೆಯ ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ. ಅಲ್ಲದೇ ಆರೋಪಿಗಳ ಕಿರುಕುಳ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.
ಇದನ್ನೂ ಓದಿ:ವಿವಸ್ತ್ರಗೊಳಿಸಿ ಹಲ್ಲೆ, ಲೈಂಗಿಕ ದೌರ್ಜನ್ಯ: ಪೊಲೀಸರ ವಿರುದ್ಧ ಸಂತ್ರಸ್ತ ಮಹಿಳೆಯಿಂದ ತಮಿಳುನಾಡು ಡಿಜಿಪಿಗೆ ದೂರು