ಕರ್ನಾಟಕ

karnataka

ETV Bharat / bharat

ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ: ಕ್ಷಮೆ ಯಾಚಿಸಿದ ಬಿಹಾರ ಸಿಎಂ ನಿತೀಶ್​ ಕುಮಾರ್​ - ಜಾತಿಗಣತಿ

Bihar CM Nitish Kumar apologized: ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ ವಿಚಾರವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಕ್ಷಮೆ ಕೋರಿದ್ದಾರೆ.

Bihar CM Nitish Kumar apologized for his objectionable statement about women
ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ: ಕ್ಷಮೆ ಕೇಳಿದ ಬಿಹಾರ ಸಿಎಂ ನಿತೀಶ್​ ಕುಮಾರ್​

By ETV Bharat Karnataka Team

Published : Nov 8, 2023, 12:58 PM IST

ಪಾಟ್ನಾ(ಬಿಹಾರ):ಜನಸಂಖ್ಯೆ ಹೆಚ್ಚಳ ಮತ್ತು ಮಹಿಳೆಯರ ಶಿಕ್ಷಣ ಕುರಿತ ಮಾತನಾಡುವ ಭರದಲ್ಲಿ ಬಿಹಾರ ಮುಖ್ಯಮಂತ್ರಿ ಹಾಗು ಜೆಡಿಯು ಹಿರಿಯ ನಾಯಕ ನಿತೀಶ್​ ಕುಮಾರ್ ಅವರು​ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದೆ. ಪ್ರಮುಖವಾಗಿ ಪ್ರತಿಪಕ್ಷ ಬಿಜೆಪಿ ತೀವ್ರವಾಗಿ ಖಂಡಿಸಿದೆ. ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಅಸಮಾಧಾನ ಹೊರಹಾಕಿದೆ. ಇದರ ಬೆನ್ನಲ್ಲೇ ಸಿಎಂ ನಿತೀಶ್​ ತಮ್ಮ ಹೇಳಿಕೆಗೆ ಬಹಿರಂಗ ಕ್ಷಮೆ ಯಾಚಿಸಿದ್ದಾರೆ.

ಮಂಗಳವಾರ ಸದನದಲ್ಲಿ ಜಾತಿಗಣತಿ ವಿಷಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ್ದ ನಿತೀಶ್, ಜನಸಂಖ್ಯೆ ಬೆಳವಣಿಗೆ ಕುರಿತಂತೆ ಮಹಿಳೆಯರ ಶಿಕ್ಷಣದ ಮೇಲೆ ಹೆಚ್ಚು ಗಮನಹರಿಸಬೇಕು. ಈ ಹಿಂದೆ ರಾಜ್ಯದಲ್ಲಿ ಫಲವತ್ತತೆ ದರ ಶೇ.4.3ರಷ್ಟಿತ್ತು. ಈಗ ಅದು ಶೇ.2.9ಕ್ಕೆ ಕುಸಿದಿದೆ. ಗರ್ಭಾವಸ್ಥೆಯಲ್ಲಿ ಲೈಂಗಿಕ ಸಂಭೋಗವನ್ನು ತಪ್ಪಿಸಲು ಮಹಿಳೆಯರಿಗೆ ಶಿಕ್ಷಣ ನೀಡಬೇಕೆಂದು ಅವರು ಹೇಳಿದ್ದರು.

ಈ ಹೇಳಿಕೆ ಸಾಕಷ್ಟು ಚರ್ಚೆ, ವಿವಾದ ಹುಟ್ಟು ಹಾಕಿತು. ಇಂದು ಸದನ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸಿಎಂ​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಬೇಕೆಂದು ಪಟ್ಟು ಹಿಡಿದರು. ಸಿಎಂ ಸದನಕ್ಕೆ ಪ್ರವೇಶಿಸದಂತೆ ಬಿಜೆಪಿ ಶಾಸಕರು ಹಾಗೂ ಪರಿಷತ್​ ಸದಸ್ಯರು ಸುತ್ತುವರೆದರು. ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ಕ್ಷಮೆ ಯಾಚಿಸಲೇಬೇಕೆಂದು ಪ್ರತಿಪಕ್ಷದ ಸದಸ್ಯರು ಆಗ್ರಹಿಸಿದರು.

ಸದನದಲ್ಲೂ ಕೋಲಾಹಲ: ಸದನದಲ್ಲೂ ಬಿಜೆಪಿ ಸದಸ್ಯರು ಕೋಲಾಹಲ ಸೃಷ್ಟಿಸಿದರು. ಈ ವೇಳೆ, ಉತ್ತರ ನೀಡಿದ ನಿತೀಶ್​, ''ನಿನ್ನೆ ನನ್ನ ಹೇಳಿಕೆ ಬಗ್ಗೆ ನೀವು (ಪ್ರತಿಪಕ್ಷದವರು) ಸಹಮತ ಹೊಂದಿದ್ದೀರಿ. ಇವತ್ತು ನನ್ನನ್ನು ನಿಂದಿಸುವಂತೆ ನಿಮಗೆ ಆದೇಶ ಬಂದಿರಬೇಕು. ಆದರೆ, ನಾನು ನಿನ್ನೆ ಮಾತನಾಡಿದ್ದನ್ನು ಹಿಂಪಡೆಯುತ್ತೇನೆ'' ಎಂದು ಹೇಳಿದರು. ಇದಕ್ಕೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ, ''ನನ್ನ ಹೇಳಿಕೆ ತಪ್ಪಾಗಿದ್ದರೆ ಕ್ಷಮೆ ಕೋರುತ್ತೇನೆ. ಅಲ್ಲದೇ, ನಾನು ಆ ಪದಗಳನ್ನು ವಾಪಸ್​ ಪಡೆಯುತ್ತೇನೆ'' ಎಂದು ತಿಳಿಸಿದರು.

ಸಿ-ಗ್ರೇಡ್ ಸಿನಿಮಾ​ ಡೈಲಾಗ್​- ಎನ್​ಸಿಡಬ್ಲ್ಯು: ನಿತೀಶ್​ ಹೇಳಿಕೆ ಕುರಿತು ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಅಸಮಾಧಾನ ವ್ಯಕ್ತಪಡಿಸಿದೆ. ''ಬಿಹಾರ ಸಿಎಂ ನೀಡಿರುವ ಆಕ್ಷೇಪಾರ್ಹ ಹೇಳಿಕೆ ಕಳವಳಕಾರಿಯಾಗಿದೆ. ಸದನದಲ್ಲಿ ಮಹಿಳೆಯರ ಮುಂದೆ ಸಿ-ಗ್ರೇಡ್​​ ಸಿನಿಮಾ ಡೈಲಾಗ್​ನಂತೆ ಅವರು ಮಾತನಾಡಿದ್ದಾರೆ'' ಎಂದು ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಆಕ್ರೋಶ ಹೊರಹಾಕಿದರು.

ಮುಂದುವರೆದು ಮಾತನಾಡಿ, ''ಅವರ (ಸಿಎಂ) ಹಿಂದೆ ಕುಳಿತಿದ್ದ ಪುರುಷರು ಹೇಳಿಕೆಗೆ ನಗುತ್ತಿದ್ದರು. ಅವರ ನಡೆ ಮತ್ತು ಸನ್ನೆಗಳು ಬಹುತೇಕ ಕೊಳಕು ಮನಸ್ಥಿತಿಯ ಹಾಸ್ಯದಂತಿದ್ದವು. ಈ ಪದಗಳನ್ನು ಇದುವರೆಗೂ ಕಡತದಿಂದ ಸ್ಪೀಕರ್ ತೆಗೆದುಹಾಕಿಲ್ಲ. ಅವರ ವಿರುದ್ಧ ಸ್ಪೀಕರ್​ ಕ್ರಮ ಕೈಗೊಳ್ಳಬೇಕು ಹಾಗೂ ಅವರ ಹೇಳಿಕೆಯನ್ನು ಕಡತದಿಂದ ತೆಗೆದುಹಾಕಬೇಕು'' ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಮೀಸಲಾತಿ: ಶೇ.50ರಿಂದ 75ಕ್ಕೆ ಹೆಚ್ಚಿಸಲು ಬಿಹಾರ ಸಚಿವ ಸಂಪುಟ ಒಪ್ಪಿಗೆ

ABOUT THE AUTHOR

...view details