ಬಿಹಾರ: ಬಿಹಾರದ ಛಪ್ರಾದಲ್ಲಿ ನಕಲಿ ಮದ್ಯ ಸೇವನೆಯಿಂದ ಸಾವನ್ನಪ್ಪಿದವರ ಸಂಖ್ಯೆ 53ಕ್ಕೆ ಏರಿದೆ. ಜಿಲ್ಲೆಯ ಮಶ್ರಕ್, ಇಸುಪುರ್, ಮಧುರಾ ಮತ್ತು ಅಮ್ನೌರ್ ಬ್ಲಾಕ್‌ಗಳಲ್ಲಿ ಜನರು ಸಾವನ್ನಪ್ಪಿದ್ದಾರೆ. 18 ಜನರು ಛಪ್ರಾ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ.
ಇದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಘಟನೆ ಸಂಬಂಧ ಮದ್ಯ ದಂಧೆಯಲ್ಲಿ ತೊಡಗಿದ್ದ 126 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಮಶ್ರಕ್ ಪೊಲೀಸ್ ಠಾಣೆಯಕೆಲ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಪೊಲೀಸರ ದಾಳಿ ಬಳಿಕ ಈ ದಂಧೆಯ ಉದ್ಯಮಿಗಳಲ್ಲಿ ಭಯ ಸಂಚಲನ ಮೂಡಿದೆ.
ಎಸ್‌ಪಿಯ ಕಟ್ಟುನಿಟ್ಟಿನ ಆದೇಶ: ಮಾಂಝಿ, ಮಶ್ರಕ್, ಮೇಕರ್ ಮತ್ತು ರಸೂಲ್‌ಪುರ ಸಮೀಪದ ಅಂತಾರಾಜ್ಯ ಅಂತರ ಜಿಲ್ಲಾ ಚೆಕ್‌ಪೋಸ್ಟ್‌ನಲ್ಲಿ ಎಸ್‌ಡಿಒ ಮತ್ತು ಎಸ್‌ಡಿಪಿಒ, ಸದರ್ ಛಾಪ್ರಾ, ಮಧುರಾ ಮತ್ತು ಸೋನುಪರ್ ಜಂಟಿಯಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಎಸ್‌ಪಿ ಸಂತೋಷ್ ಕುಮಾರ್ ಆದೇಶಿಸಿದ್ದಾರೆ.
ಇದರೊಂದಿಗೆ ಗಡಿ ಪ್ರದೇಶಗಳು ಮತ್ತು ಇಸುಪುರ್, ಮಶ್ರಕ್, ಮಧುರಾ ಮತ್ತು ಅಮ್ನೌರ್ ಬ್ಲಾಕ್‌ಗಳ ಪೀಡಿತ ಪ್ರದೇಶಗಳಲ್ಲಿ ಮನೆ-ಮನೆ ಸಮೀಕ್ಷೆ ಮಾಡಿ ಮದ್ಯ ಸಾಗಾಟದಲ್ಲಿ ತೊಡಗಿದ್ದ ಹಲವರ ವಿರುದ್ಧವೂ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
48 ಗಂಟೆಯಲ್ಲಿ ಕಾನೂನು ವಾಪಸ್ ಪಡೆಯಿರಿ:ಬಿಹಾರದಲ್ಲಿ ಮದ್ಯಪಾನ ನಿಷೇಧ ಕಾನೂನನ್ನು 48 ಗಂಟೆಗಳಲ್ಲಿ ಹಿಂಪಡೆಯಬೇಕು ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹಠಮಾರಿತನದಿಂದ ಮದ್ಯ ದುರಂತಗಳು ಸಂಭವಿಸುತ್ತಿವೆ ಎಂದು ಅವರು ಕಿಡಿಕಾರಿದ್ದಾರೆ.
ಬಿಹಾರದಲ್ಲಿ ಮದ್ಯ ನಿಷೇಧ ಜಾರಿ ಸಂಪೂರ್ಣ ವಿಫಲವಾಗಿದೆ. ಬಿಹಾರದಲ್ಲಿ ಎಲ್ಲೆಲ್ಲೂ ನಕಲಿ ಮದ್ಯ ಲಭ್ಯವಿದೆ. ನಿತೀಶ್ ಕುಮಾರ್ ಅವರನ್ನು ಸುತ್ತುವರೆದಿರುವ ಅಧಿಕಾರಿಗಳು ಕೂಡ ಮನೆಯಲ್ಲಿ ಮದ್ಯ ಸೇವಿಸುತ್ತಿದ್ದರು. ಎರಡು ವರ್ಷ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿಯೇ ಇದ್ದು ಅವರ ಚಟುವಟಿಕೆಗಳು ನನಗೆ ತಿಳಿದಿವೆ ಎಂದು ಪಿಕೆ ಹೊಸ ಬಾಂಬ್ ಸಿಡಿಸಿದ್ದಾರೆ.
ಬಿಜೆಪಿ ವಿರುದ್ಧವೂ ಹರಿಹಾಯ್ದಿರುವ ಕಿಶೋರ್: ವಿಧಾನಸೌಧದಲ್ಲಿ ಬಿಜೆಪಿ ವಿಷಯ ಪ್ರಸ್ತಾಪಿಸಿದ್ದಕ್ಕೆ ಪ್ರತಿಕ್ರಿಯಿಸಿದ ಪ್ರಶಾಂತ್ ಕಿಶೋರ್, ಸುಶೀಲ್ ಕುಮಾರ್ ಮೋದಿ ಬಿಹಾರದ ಉಪಮುಖ್ಯಮಂತ್ರಿಯಾಗಿದ್ದಾಗ ಮದ್ಯಪಾನ ನಿಷೇಧವನ್ನು ಜಾರಿಗೆ ತಂದರು. ಆಗ ಬಿಜೆಪಿ ಈ ಕಾಯ್ದೆಯನ್ನು ಬೆಂಬಲಿಸಿತ್ತು. ಬಿಜೆಪಿ ಏಕೆ ಪ್ರಶ್ನೆಗಳನ್ನು ಕೇಳುತ್ತದೆ? ಎಂದು ಖಾರವಾಗಿಯೇ ಪ್ರಶ್ನೆ ಮಾಡಿದ್ದಾರೆ.
ಅದೇ ರೀತಿ ಆರ್‌ಜೆಡಿ ವಿರೋಧ ಪಕ್ಷದಲ್ಲಿದ್ದಾಗ ಅದರ ನಾಯಕರು ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ದರು, ನಿತೀಶ್ ಕುಮಾರ್ ಅವರನ್ನು ಏಕೆ ಪ್ರಶ್ನೆ ಕೇಳುತ್ತಿಲ್ಲ, ಬಿಜೆಪಿ ಮತ್ತು ಆರ್‌ಜೆಡಿ ಒಂದೇ ನಿಲುವು ಹೊಂದಿವೆ. ಅಧಿಕಾರದಲ್ಲಿದ್ದಾಗ ಈ ವಿಚಾರದಲ್ಲಿ ಮೌನ ವಹಿಸುತ್ತಾರೆ ಮತ್ತು ಅವರು ವಿರೋಧ ಪಕ್ಷದಲ್ಲಿದ್ದಾಗ ರಾಜ್ಯ ಸರ್ಕಾರವನ್ನು ಪ್ರಶ್ನಿಸುತ್ತಾರೆ ಎಂದು ಹರಿಹಾಯ್ದಿದ್ದಾರೆ.
ಇದನ್ನೂ ಓದಿ: ಮದ್ಯ ಸೇವಿಸುವವರು ಖಂಡಿತಾ ಸಾಯ್ತಾರೆ ಎಂದ ನಿತೀಶ್ ಕುಮಾರ್